ಯುನೈಟೆಡ್ ಸ್ಟೇಟ್ಸ್ : ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚಿನಿಂದಾಗಿ ಸಾವಿರಾರು ಎಕರೆಗಳಷ್ಟು ಅರಣ್ಯ ಸುಟ್ಟು ಭಸ್ಮವಾಗಿದೆ. ಇನ್ನು ಅಲ್ಲಿದ್ದಂತಹ ಜನರನ್ನು ಸ್ಥಳಾಂತರ ಮಾಡಲಾಗಿದೆ. ಅಮೆರಿಕಾದಲ್ಲಿ ಈಗಾಗಲೇ ದಾಖಲೆಯ ತಾಪಮಾನ ಏರಿಕೆಯಾಗುತ್ತಿದೆ.
ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದ ಬಳಿ ಶುಕ್ರವಾರ ಸಂಭವಿಸಿದ ಬೆಂಕಿಯನ್ನು ನಂದಿಸಲು 17 ಹೆಲಿಕಾಪ್ಟರ್ಗಳನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಸುಮಾರು 2,000 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ಸಂರಕ್ಷಣಾ ಇಲಾಖೆ (CAL FIRE) ವರದಿಯಲ್ಲಿ ತಿಳಿಸಿದೆ.
ಸತತ ಎರಡು ದಿನಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರ ಬೆಂಕಿಯ ಜ್ವಾಲೆಗೆ ಈಗಾಗಲೇ 14,200 ಎಕರೆ (5,750 ಹೆಕ್ಟೇರ್) ಗಿಂತ ಹೆಚ್ಚು ನಾಶವಾಗಿದೆ.ಘಟನೆಯಲ್ಲಿ ಅನೇಕ ವಾಹನಗಳು ನಾಶವಾಗಿವೆ. ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಇನ್ನು ಸಮೀಪದಲ್ಲಿದ್ದಂತಹ ಸುಮಾರು 6,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು CAL FIRE ಅಧಿಕಾರಿ ಹೆಕ್ಟರ್ ವಾಸ್ಕ್ವೆಜ್ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಶನಿವಾರ ಮಾರಿಪೋಸಾ ಕೌಂಟಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಕ್ಯಾಲಿಫೋರ್ನಿಯಾ ಮತ್ತು ಪಶ್ಚಿಮ ಯುನೈಟೆಡ್ ಸ್ಟೇಟ್ಸ್ನ ಇತರ ಭಾಗಗಳು ಬೃಹತ್ ಮತ್ತು ವೇಗವಾಗಿ ಚಲಿಸುವ ಕಾಳ್ಗಿಚ್ಚುಗಳಿಂದ ಧ್ವಂಸಗೊಂಡಿವೆ.ಇದು ವರ್ಷಗಳ ಬರ ಮತ್ತು ಬೆಚ್ಚಗಾಗುವ ಹವಾಮಾನದಿಂದ ನಡೆಸಲ್ಪಟ್ಟಿದೆ.