ನವದೆಹಲಿ: ರೈಲು ಟಿಕೆಟ್ ಬುಕಿಂಗ್‌ನಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಭಾರತೀಯ ರೈಲ್ವೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಐಆರ್‌ಸಿಟಿಸಿ (IRCTC) ವೆಬ್‌ಸೈಟ್‌ನಲ್ಲಿ ಸೃಷ್ಟಿಯಾಗಿದ್ದ ಸುಮಾರು 3 ಕೋಟಿಗೂ ಅಧಿಕ (3.02 ಕೋಟಿ) ನಕಲಿ ಮತ್ತು ಶಂಕಾಸ್ಪದ ಖಾತೆಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಟಿಕೆಟ್ ದಲ್ಲಾಳಿಗಳು ಮತ್ತು ಏಜೆಂಟರು ‘ಬೋಟ್’ (Bots) ಎಂಬ ತಂತ್ರಾಂಶಗಳನ್ನು ಬಳಸಿ ಸಾವಿರಾರು ನಕಲಿ ಐಡಿಗಳನ್ನು ಸೃಷ್ಟಿಸುತ್ತಿದ್ದರು. ತತ್ಕಾಲ್ ಬುಕಿಂಗ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ಸಾಮಾನ್ಯ ಜನರಿಗೆ ಟಿಕೆಟ್ ಸಿಗದಂತೆ ಈ ಖಾತೆಗಳ ಮೂಲಕ ಟಿಕೆಟ್‌ಗಳನ್ನು ಬ್ಲಾಕ್ ಮಾಡಲಾಗುತ್ತಿತ್ತು.
ಈ ಅಕ್ರಮಗಳನ್ನು ತಡೆಯಲು ರೈಲ್ವೆ ಇಲಾಖೆಯು ಈಗ ಆಧಾರ್ ಆಧಾರಿತ ಓಟಿಪಿ (OTP) ದೃಢೀಕರಣವನ್ನು ಕಡ್ಡಾಯಗೊಳಿಸುತ್ತಿದೆ. ಇದರಿಂದಾಗಿ ನಿಜವಾದ ಪ್ರಯಾಣಿಕರು ಮಾತ್ರ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತಿದೆ.
ಈ ಕಟ್ಟುನಿಟ್ಟಿನ ಕ್ರಮದ ನಂತರ, ಐಆರ್‌ಸಿಟಿಸಿಯಲ್ಲಿ ಪ್ರತಿದಿನ ಹೊಸದಾಗಿ ಸೃಷ್ಟಿಯಾಗುತ್ತಿದ್ದ ಖಾತೆಗಳ ಸಂಖ್ಯೆ 1 ಲಕ್ಷದಿಂದ ಕೇವಲ 5,000 ಕ್ಕೆ ಇಳಿಕೆಯಾಗಿದೆ. ಇದು ನಕಲಿ ಖಾತೆಗಳ ಪ್ರಮಾಣ ಎಷ್ಟಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.








