ಜೈಪುರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ‘ಆಪರೇಷನ್ ಸಿಂದೂರ್’ (Operation Sindoor) ಗುರುವಾರಕ್ಕೆ ಒಂದು ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ರಾಜಸ್ಥಾನದ ಜೈಪುರದಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ದೇಶದ ಸಾರ್ವಭೌಮತ್ವದ ರಕ್ಷಣೆಗೆ ಸಶಸ್ತ್ರ ಪಡೆಗಳು ಬದ್ಧವಾಗಿವೆ ಎಂದು ಪುನರುಚ್ಚರಿಸಿವೆ.
ಸರ್ಕಾರದಿಂದ ಮುಕ್ತ ಅವಕಾಶ: ನಿಖರ ಕಾರ್ಯಾಚರಣೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು, “ಸರ್ಕಾರವು ನಮಗೆ ಸ್ಪಷ್ಟವಾದ ರಾಜಕೀಯ-ಸೇನಾ ಗುರಿಗಳನ್ನು ನೀಡಿತು ಮತ್ತು ಅವುಗಳನ್ನು ಸಾಧಿಸಲು ಕಾರ್ಯಾಚರಣೆಯ ಸ್ವಾತಂತ್ರ್ಯವನ್ನೂ ನೀಡಿತು. ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ನಾಶಪಡಿಸುವುದು ಮತ್ತು ಭವಿಷ್ಯದ ಆಕ್ರಮಣಗಳನ್ನು ತಡೆಯುವುದೇ ನಮ್ಮ ಉದ್ದೇಶವಾಗಿತ್ತು,” ಎಂದರು.
ದುಷ್ಯಂತ್ ಕುಮಾರ್ ಅವರ ಕವಿತೆಯ ಸಾಲುಗಳನ್ನು ಉಲ್ಲೇಖಿಸಿದ ಅವರು, “ಕೇವಲ ಹಂಗಾಮಾ ಮಾಡುವುದು ನನ್ನ ಉದ್ದೇಶವಲ್ಲ, ಈ ಪರಿಸ್ಥಿತಿಯನ್ನು ಬದಲಿಸುವುದು ನನ್ನ ಪ್ರಯತ್ನ” (Sirf hungama khada karna mera maqsad nahi…) ಎಂದು ಮಾರ್ಮಿಕವಾಗಿ ನುಡಿದರು. ಆಪರೇಷನ್ ಸಿಂದೂರ್ ಎಂಬುದು ಕೇವಲ ಅಂತ್ಯವಲ್ಲ, ಇದು ಭಯೋತ್ಪಾದನೆಯ ವಿರುದ್ಧ ಭಾರತದ ಸುದೀರ್ಘ ಹೋರಾಟದ ಆರಂಭ ಎಂದು ಅವರು ಎಚ್ಚರಿಸಿದರು.
ಪಾಕಿಸ್ತಾನದ ನೆಲೆಗಳ ಮೇಲೆ ದಾಳಿ
ವಾಯುಸೇನೆಯ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರತಿ ಮಾತನಾಡಿ, “ನಮ್ಮ ಹೋರಾಟ ಭಯೋತ್ಪಾದಕರು ಮತ್ತು ಅವರ ಮೂಲಸೌಕರ್ಯಗಳ ವಿರುದ್ಧವಾಗಿತ್ತು. ಪಾಕಿಸ್ತಾನದ ಒಳಗೆ ಯಾವುದೇ ಭಯೋತ್ಪಾದಕ ಅಡಗುತಾಣಗಳು ಸುರಕ್ಷಿತವಾಗಿಲ್ಲ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ. ಈ ಕಾರ್ಯಾಚರಣೆಯು ಕೇವಲ ಸ್ಥಗಿತಗೊಂಡಿದೆ ಅಷ್ಟೇ ಹೊರತು ಮುಕ್ತಾಯವಾಗಿಲ್ಲ,” ಎಂದು ಸ್ಪಷ್ಟಪಡಿಸಿದರು.
ಕಾರ್ಯಾಚರಣೆಯ ಯಶಸ್ಸನ್ನು ವಿವರಿಸಿದ ಅಧಿಕಾರಿಗಳು, ಪಾಕಿಸ್ತಾನದ 11 ವಾಯುನೆಲೆಗಳು ಮತ್ತು 9 ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ. ಆದರೆ, ಭಾರತದ ಯಾವುದೇ ಸೇನಾ ಸ್ವತ್ತುಗಳಿಗೆ ಹಾನಿ ಮಾಡಲು ಶತ್ರು ರಾಷ್ಟ್ರಕ್ಕೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ನೌಕಾಸೇನೆಯ ಕೆಚ್ಚೆದೆ ಮತ್ತು ‘ಬ್ರಹ್ಮೋಸ್’ ಅಬ್ಬರ
ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಅವರು ನೌಕಾಸೇನೆಯ ಪಾತ್ರವನ್ನು ವಿವರಿಸುತ್ತಾ, “ನಮ್ಮ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಪಾಕಿಸ್ತಾನದ ಬಂದರುಗಳ ಬಳಿಯೇ ಮೊಕ್ಕಾಂ ಹೂಡಿದ್ದರಿಂದ, ಪಾಕ್ ನೌಕಾದಳವು ಹೊರಬರಲು ಸಾಧ್ಯವಾಗದೆ ಬಂದರಿನಲ್ಲೇ ಉಳಿಯುವಂತಾಯಿತು,” ಎಂದರು.
ಈ ಬೃಹತ್ ಕಾರ್ಯಾಚರಣೆಯಲ್ಲಿ ಭಾರತದಲ್ಲೇ ತಯಾರಾದ ‘ಬ್ರಹ್ಮೋಸ್’ ಕ್ಷಿಪಣಿ ಮತ್ತು ‘ಆಕಾಶ್’ ನಂತಹ ಶಸ್ತ್ರಾಸ್ತ್ರ ವ್ಯವಸ್ಥೆಗಳು ನಿರ್ಣಾಯಕ ಪಾತ್ರ ವಹಿಸಿವೆ. ಭಾರತದ ಸ್ವತ್ತುಗಳನ್ನು ರಕ್ಷಿಸಲು ಇದೀಗ ‘ಮಿಷನ್ ಸುದರ್ಶನ್ ಚಕ್ರ’ ಸಿದ್ಧಪಡಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಲಾಯಿತು.








