ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹನ್ನೊಂದು ವರ್ಷಗಳ ಆಡಳಿತದಲ್ಲಿ ದೇಶದ ಭಾರತದ ಶತ್ರುಗಳು ಕಂಗಾಲಾಗಿದ್ದಾರೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ ಹೇಳಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು; ರಾಷ್ಟ್ರದ ಭದ್ರತೆ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಂಡಿರುವ ಮೋದಿ ಅವರು ತಮ್ಮ ರಾಜಕೀಯ ಇಚ್ಚಾಶಕ್ತಿಯಿಂದ ಭಾರತದ ಪ್ರತಿಷ್ಠೆ ಹೆಚ್ಚಿಸಿದ್ದಾರೆ ಎಂದರು.
ಆಪರೇಷನ್ ಸಿಂಧೂರ ಹೆಮ್ಮೆಯ ಕಾರ್ಯಾಚರಣೆ ಆಗಿದ್ದು, ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ಮೇಲೆ ನಿರ್ದಿಷ್ಟ ದಾಳಿ ನಡೆಸಿದ ಸೇನೆಯ ಪರಾಕ್ರಮವನ್ನು ನಾವು ಸ್ಮರಿಸಬೇಕು. ನೆರೆಯ ದೇಶದ ನಾಗರೀಕರಿಗೆ ಯಾವುದೇ ಹಾನಿ ಆಗದಂತೆ ಯಶಸ್ವಿ ದಾಳಿ ನಡೆಸುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಭಾರತದ ಶಕ್ತಿ ಏನೆಂಬುದು ಜಗತ್ತಿಗೆ ಪರಿಚಯವಾಗಿದೆ ಎಂದು ರಮೇಶ್ ಗೌಡರು ಹೇಳಿದರು.
೨೦೪೭ಕ್ಕೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದ್ದು, ಈ ನಿಟ್ಟಿನಲ್ಲಿ ಕೈಗಾರಿಕೆ, ಉತ್ಪಾದನೆ, ಸೇವಾ ವಲಯಗಳಿಗೆ ಅತಿಹೆಚ್ಚು ಪ್ರಾಮುಖ್ಯ ನೀಡಲಾಗುತ್ತಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಕೆಲಸ ಮಾಡುತ್ತಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಎರಡೂ ಇಲಾಖೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಅವರು ಹೇಳಿದರು.
ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕಾರ್ಯಕರ್ತರು ಮೋದಿ ಸರಕಾರದ ಸಾಧನೆಗಳ ಜೊತೆಗೆ ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ .ಕುಮಾರಸ್ವಾಮಿ ಅವರು ನೀಡಿರುವ ಕೊಡುಗೆಗಳನ್ನು ಜನತೆಗೆ ತಿಳಿಸಬೇಕು. ೨೦೩೦ರ ವೇಳೆ ದೇಶದಲ್ಲಿ ವರ್ಷಕ್ಕೆ ೩೦೦ ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡಬೇಕು ಎಂದು ಪ್ರಧಾನಿಗಳು ನಿಗದಿಪಡಿಸಿರುವ ಗುರಿಯನ್ನು ಮುಟ್ಟಲು ಕುಮಾರಸ್ವಾಮಿ ಅವರು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಮೇಶ್ ಗೌಡರು ಹೇಳಿದರು.
ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಅವರ ರಾಜ್ಯದ ಸಂಘಟನಾ ಪ್ರವಾಸದಿಂದ ಈಗಾಗಲೇ ಲಕ್ಷ್ಯಾಂತರ ಜನರ ಜೆಡಿಎಸ್ ಸದಸ್ಯತ್ವ ಪಡೆದುಕೊಂಡು ಸಕ್ರಿಯವಾಗಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಯುವ ನಾಯಕರ ಕೈಯ್ಯನ್ನು ನಾವು ಬಲಪಡಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ಮಾಜಿ ಶಾಸಕರಾದ ಎಂ.ಎಸ್. ನಾರಾಯಣರಾವ್, ಆರ್. ಚೌಡರೆಡ್ಡಿ ತೂಪಲ್ಲಿ, ಕೆ.ಎಸ್.ಆರ್.ಟಿ.ಸಿ ಮಾಜಿ ಅಧ್ಯಕ್ಷ ಟಿ.ಪ್ರಭಾಕರ್, ಬೆಂಗಳೂರು ನಗರ ಉಸ್ತುವಾರಿ ಜಗದೀಶ್ ನಾಗರಾಜಯ್ಯ, ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್, ನಗರ ಘಟಕದ ಮಾಜಿ ಅಧ್ಯಕ್ಷ ಆರ್.ಪ್ರಕಾಶ್, ರಾಜ್ಯ ಸೇವಾ ದಳ ಅಧ್ಯಕ್ಷ ಬಸವರಾಜ್ ಪಾದಯಾತ್ರಿ, ನಗರ ಕಾರ್ಯಾಧ್ಯಕ್ಷ ಕೆ.ವಿ. ನಾರಾಯಣಸ್ವಾಮಿ, ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ, ನಗರ ಸೇವಾ ದಳ ವಿಭಾಗದ ಅಧ್ಯಕ್ಷ ಪಿ.ಮಹೇಶ್, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಅಧ್ಯಕ್ಷ ಎ.ಎಂ.ಪ್ರವೀಣ್ ಕುಮಾರ್, ಚೆನ್ನೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ತಾರಾ ಲೋಕೇಶ್, ಬೆಂಗಳೂರು ನಗರ ವಿಭಾಗಗಳ ಅಧ್ಯಕ್ಷರುಗಳಾದ ಜಿ.ವೇಲು, ಸ್ಯಾಮುಯಲ್, ಅಪ್ರೋಜ್ ಬೇಗ್, ಸಿ.ಎಂ. ನಾಗರಾಜ್, ಎಂ.ಗೋಪಾಲ, ಫಣಿರಾಜ್ ಹಿರಿಯಣ್ಣಗೌಡ, ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರುಗಳಾದ ಸೈಯದ್ ತಹಸಿನ್, ಬಿ.ಎಸ್.ಗಣೇಶ್, ಕೆ.ಎನ್.ದಯಾನಂದ್ ಮೂರ್ತಿ, ಓ.ಪಿ.ಓಬಳೇಶ್, ಆರ್.ಚಂದ್ರಶೇಖರ್, ಎ.ನಾಗೇಂದ್ರ ಪ್ರಸಾದ್ ಬಾಬು, ಶಂಕರ್ , ಟಿ. ಶಿವಕುಮಾರ್, ಆನಂದ ಕಣ್ಣನ್, ಕೆ.ಜೆ.ರಮೇಶ್ ಮುಂತಾದವರು ಭಾಗವಹಿಸಿದ್ದರು.