ಶಿವಮೊಗ್ಗ: ಈ ದೇಶದಲ್ಲಿ ತಲೆಬಾಗುವುದು ಎಂದರೇ ಅದು ಶಿಕ್ಷಕರಿಗೆ ಮಾತ್ರ. ದೇಶದ ಬದಲಾಗಣೆಗೆ ಶಿಕ್ಷಕರ ಪಾತ್ರ ಹೆಚ್ಚು ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಇಂದು ಸಾಗರ ನಗರದ ನೆಹರೂ ಮೈದಾನದಲ್ಲಿ ನಡೆದಂತ ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ನೀವು ಕೇವಲ ಶಿಕ್ಷಕರಲ್ಲ. ಈ ನಾಡಿನ ಶಿಲ್ಪಿಗಳು. ಶಿಕ್ಷಣದ ಕ್ರಾಂತಿ ನಮ್ಮ ತಾಲ್ಲೂಕಿನಲ್ಲಿ ನಿಮ್ಮಿಂದ ನಡೆಯುತ್ತಿದೆ ಎಂದರು.
ಸಾಗರ ತಾಲ್ಲೂಕಿನಲ್ಲಿ ಗಣನೀಯ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿದೆ. 24 ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ತಂದುಕೊಟ್ಟಿದ್ದೀರಿ. ಈ ಸಾಧನೆಗೆ ಕಾರಣೀಭೂತರಾದಂತ 24 ಶಾಲೆಯ ಶಿಕ್ಷಕರಿಗೂ ಶಾಸಕರಾಗಿ ತಾನು ಸನ್ಮಾನ ಮಾಡಲಿದ್ದೇನೆ. ಅಂದು ಎಲ್ಲಾ ಶಾಲೆಯ ಶಿಕ್ಷಕರು ಬರಬೇಕು ಎಂದು ಮನವಿ ಮಾಡಿದರು.
ಈ ದೇಶದಲ್ಲಿ ತಲೆಬಾಗುವುದು ಶಿಕ್ಷಕರಿಗೆ ಮಾತ್ರ. ದೇಶದ ಬದಲಾವಣೆ ಆಗುತ್ತಿದೆ ಅಂದ್ರೆ ಅದು ಶಿಕ್ಷಕರಿಂದಲೇ ಆಗಿದೆ. ದೇಶದಲ್ಲಿ ಶಿಕ್ಷಕರ ಪಾತ್ರ ಹೆಚ್ಚು ಎಂಬುದಾಗಿ ಶಿಕ್ಷಕರನ್ನು ಕೊಂಡಾಡಿದರು.
ಸಾಗರ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ಕ್ರಮ ವಹಿಸಲಾಗುತ್ತದೆ. ಶಾಲಾ ಕಟ್ಟಡಗಳ ದುರಸ್ಥಿ ಕಾರ್ಯಕ್ಕೂ ಕ್ರಮವಹಿಸಲಾಗುತ್ತದೆ. ಹಂತ ಹಂತವಾಗಿ ದುರಸ್ಥಿ ಕಾರ್ಯವನ್ನು ಮಾಡಲಾಗುವುದು ಎಂದು ಹೇಳಿದರು.
ನನಗೆ ಶಿಕ್ಷಣ ಅಂದರೇ ಬಹಳ ಇಷ್ಟ. ನನ್ನ ಕಲಿಸಿದಂತ ಗುರುಗಳನ್ನು ಈಗಲೂ ಸ್ಮರಿಸುತ್ತೇನೆ. ಅವರು ಕಲಿಸಿದ ಕಲಿಕೆಯೇ ನನ್ನ ಇಲ್ಲಿಗೆ ತಂದು ನಿಲ್ಲಿಸಿದೆ. ಇಂತಹ ಶಿಕ್ಷಕರಿಗೆ, ಇಲ್ಲಿರುವಂತ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಅಂತ ಶುಭಕೋರಿದರು.
ಶಿಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವೆ. ನಾನು ಇದುವರೆಗೆ ಯಾವುದೇ ಶಿಕ್ಷಕರನ್ನು ಬೈದಿದ್ದಿಲ್ಲ. ಅವರ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇನೆ ಎಂದರು.
ಶಿಕ್ಷಕರ ಭವನಕ್ಕೆ ಬೇಕಿರುವ ಅನುದಾನ ಒದಗಿಸಿ ಕೊಡುವ ಕೆಲಸ ಮಾಡಲಿದ್ದೇನೆ. ಈ ವರ್ಷವೂ ಸಾಗರ ತಾಲ್ಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ಮುಂದುವರೆಯಲಿ. ಈ ವರ್ಷವೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಬರುವಂತ ಶಾಲೆಗಳ ಸಂಖ್ಯೆ ಹೆಚ್ಚಾಗುವ ನಿಟ್ಟಿನಲ್ಲಿ ಕೆಲಸ ಮಾಡುವಂತಾಗಲಿ ಎಂದು ಆಶಿಸಿದರು.
ಅಂದಹಾಗೇ ಸಾಗರದಲ್ಲಿನ ಖಾಸಗಿ, ಅನುದಾನಿತ, ಅನುದಾನ ರಹಿತ, ಸರ್ಕಾರಿ ಪ್ರೌಢ ಶಾಲೆಗಳು 56 ಇದ್ದಾವೆ. ಅವುಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ 24 ಸರ್ಕಾರಿ ಪ್ರೌಢ ಶಾಲೆಯಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ.
ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ.ಅನ್ನಪೂರ್ಣ ಮತ್ತು ತಂಡದವರು ಪ್ರಾರ್ಥಿಸಿದರೇ, ಸಾಗರದ ಸಿ ಆರ್ ಪಿ ಶಿಕ್ಷಕರ ತಂಡ ನಾಡಗೀತೆ ಮೊಳಗಿಸಿತು. ಕಲಾ ಸಿಂಚನ ಶಿಕ್ಷಕರ ತಂಡದಿಂದ ರೈತಗೀತೆಯನ್ನಾಡಿದರು. ಸಾಗರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಅವರು ನೆರೆದಿದ್ದಂತ ಗಣ್ಯರನ್ನು ಸ್ವಾಗತಿಸಿದರು. ಸಾಹಿತಿಗಳು ಹಾಗೂ ಉಪನ್ಯಾಸಕರು, ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ವಸುಮತಿ ಗೌಡ ಅವರು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದಂತ ವಿದ್ಯಾರ್ಥಿಗಳಿಗೆ, ತಾಲ್ಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪೃರಸ್ಕೃತರಿಗೆ ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಇಂದಿನ ಸೆ.5ರ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಾಗರ ಉಪವಿಭಾಗಾಧಿಕಾರಿ ಯತೀಶ್ ಆರ್, ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಕ್ಷೇತ್ರ ಸಮನ್ವಯಾಧಿಕಾರಿ ಡಾ.ಅನ್ನಪೂರ್ಣ, ಪಿಎಂ ಪೋಷಣ್ ಸಹಾಯಕ ನಿರ್ದೇಶಕರ ಭೂಮೇಶ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್ ಎನ್.ಕೆ, ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ ಜಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಆರ್ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷೆ ಪ್ರೇಮಕುಮಾರಿ.ಪಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ವರ.ಜಿ, ಹಿರಿಯ ಪ್ರಾಥಮಿಕ ಶಾಲಾ ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭು ಇ.ಎನ್ ಸೇರಿದಂತೆ ಇತರರು ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು