ವಿಧಾನಸಭೆ : ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರ ಪರ್ವತ ಚಾರಣಕ್ಕೆ ಆಗಮಿಸುವವರು ಕಡ್ಡಾಯವಾಗಿ ಆನ್ ಲೈನ್ ಮೂಲಕ ಮಾತ್ರ ಟಿಕೆಟ್ ಖರೀದಿಸಬೇಕಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ.
ಸದಸ್ಯರಾದ ಭಾಗೀರಥಿ ಮುರುಳ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದೇ ದಿನ 2-3 ಸಾವಿರ ಜನರು ಒಂದೇಕಡೆ ಸೇರಿದರೆ ಅನಾಹುತ ಆಗುತ್ತದೆ. ಹೀಗಾಗಿ ನಿಯಂತ್ರಣ ಕ್ರಮ ಕೈಗೊಂಡು ಪ್ರತಿನಿತ್ಯ 150 ಜನರಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಚಾರುವ ಕಾರಣ, ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಭೀತಿ ಎದುರಾಗುವ ಕಾರಣ ಚಾರಣ ಇರುವುದಿಲ್ಲ ಎಂದು ವಿವರಿಸಿದರು.
ಸುಬ್ರಹ್ಮಣ್ಯದಿಂದ ಕುಮಾರಪರ್ವತಕ್ಕೆ 24 ಕಿ.ಮೀ ಚಾರಣ ಪಥವಿದ್ದು, ಹೋಗಿ, ಮರಳಿ ಬರಲು 2 ದಿನ ಆಗುತ್ತಿತ್ತು, ರಾತ್ರಿ ಅಲ್ಲೇ ಉಳಿಯಬೇಕಿತ್ತು. ಅಲ್ಲಿ ವನ್ಯಜೀವಿಗಳ ಸಂಚಾರವೂ ಇರುವ ಕಾರಣ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ 2024ರ ಜೂನ್ 5ರಂದು ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮಾನವ-ವನ್ಯಜೀವಿ ಸಂಘರ್ಷ ಉಪಶಮನ ನಿಧಿ ಸಭೆಯಲ್ಲಿ ರಾತ್ರಿ ತಂಗಲು ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸುಬ್ರಹ್ಮಣ್ಯ ಮಾರ್ಗವಾಗಿ ಇರುವ ಶೇಷ ಪರ್ವತವು ಕುಮಾರಪರ್ವತದಿಂದ 2 ಕಿ.ಮೀ. ಅಂತದಲ್ಲಿದ್ದು, ಇದು ಅತ್ಯಂತ ದುರ್ಗಮವಾಗಿರುವ ಕಾರಣ 2025ರ ಡಿಸೆಂಬರ್ ನಿಂದ ಅದೇ ಚಾರಣ ಮಾರ್ಗದಲ್ಲಿ ಶೇಷಪರ್ವತಕ್ಕೆ 20 ಕಿ.ಮೀ.ಗೆ ಸೀಮಿತಗೊಳಿಸಿ 12 ಗಂಟೆಗಳ ಒಳಗಾಗಿ ಅಂದರೆ ಬೆಳಗ್ಗೆ 6ಕ್ಕೆ ಚಾರಣ ಆರಂಭಿಸಿ, ಸಂಜೆ 6ರೊಳಗೆ ಮರಳಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಚಾರಣ ಆರಂಭದ ಸಮಯವನ್ನು ಬೆಳಗ್ಗೆ 6ಗಂಟೆಗೆ ಬದಲಾಗಿ 5.30ಕ್ಕೆ ಆರಂಭಿಸಬೇಕೆಂಬ ಸದಸ್ಯರ ಸಲಹೆಯ ಬಗ್ಗೆ ಪರಿಶೀಲಿಸುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.








