ಬೆಂಗಳೂರು: ನಗರದಲ್ಲಿ ಆನ್ ಲೈನ್ ನಲ್ಲಿ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ಜಾಲವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ 8 ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರನ್ನು ಆನ್ ಲೈನ್ ನಲ್ಲಿ ಹೂಡಿಕೆ ಮಾಡುವಂತೆ ಆರೋಪಿಗಳು ಪ್ರಚಾರ ಮಾಡುತ್ತಿದ್ದರು. ಫೇಸ್ ಬುಕ್, ವಾಟ್ಸ್ ಆಪ್, ಇನ್ ಸ್ಟಾಗ್ರಾಂ ಮೂಲಕ ಹೂಡಿಕೆ ಮಾಡುವಂತೆ ಆಮಿಷವನ್ನು ಒಡ್ಡುತ್ತಿದ್ದರು.
ಈ ಆಮಿಷಕ್ಕೆ ಒಳಗಾದಂತ ಜನರು ದೇಶ, ವಿದೇಶಗಳಿಂದಲೂ ಆನ್ ಲೈನ್ ಮೂಲಕ ಹೂಡಿಕೆ ಮಾಡಿದ್ದರು. ಹೆಚ್ಚು ಲಾಭಾಂಶ ನೀಡೋದಾಗಿ ಹೂಡಿಕೆ ಮಾಡಿಸಿಕೊಂಡಿದ್ದಂತ ಆರೋಪಿಗಳು, ಹಣವನ್ನು ಹಿಂದಿರುಗಿಸದೇ ವಂಚಿಸುತ್ತಿದ್ದರು.
ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನಲೆಯಲ್ಲಿ ಕೆಂಗೇರಿ ಠಾಣೆಯ ಪೊಲೀಸರು ಬೆಂಗಳೂರಿನ 7 ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ದಾಳಿಯ ವೇಳೆಯಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 19 ಲ್ಯಾಪ್ ಟಾಪ್, 40 ಮೊಬೈಲ್, 11 ಪೆನ್ ಡ್ರೈವ್, 42 ಸಿಮ್ ಕಾರ್ಡ್, 4 ಐಪ್ಯಾಡ್, 2 ಹಾರ್ಡ್ ಡಿಸ್ಕ್, 5 ಸಿಪಿಯು, 13 ಸೀಲುಗಳು, 10 ಮೆಮೋರಿ ಕಾರ್ಡ್ ಹಾಗೂ ವಿದೇಶಿ ಕರೆನ್ಸಿ, ಕರೆನ್ಸಿ ಕೌಂಟಿಂಗ್ ಮಿಷನ್, 6 ಕೋಟಿ ಬೆಲೆಬಾಳು ಸ್ಥಿರಾಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.