ಬೆಂಗಳೂರು: ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ಕನ್ನಡದ ಧ್ವಜವನ್ನು ರಾಜ್ಯೋತ್ಸವದ ದಿನದಂದು ಎಲ್ಲ ಕನ್ನಡಿಗರು ತಮ್ಮ ಮನೆಯ ಮೇಲೆ ಹಾರಿಸುವ ಮೂಲಕ, ಕನ್ನಡದ ಕಣ್ವ ಎಂದೇ ಖ್ಯಾತರಾದ ಬಿ.ಎಮ್,ಶ್ರೀಕಂಠಯ್ಯನವರು ರಚಿಸಿದ “ಏರಿಸಿ ಹಾರಿಸಿ ಕನ್ನಡದ ಬಾವುಟ, ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ” ಎನ್ನುವಂತೆ ಅರ್ಥಪೂರ್ಣವಾಗಿ ಕನ್ನಡ ಪ್ರೇಮವನ್ನು ಮೆರೆಯೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಕರೆ ನೀಡಿದ್ದಾರೆ.
ನವೆಂಬರ್ ೧ ರಂದು ರಾಜ್ಯೋತ್ಸವವನ್ನು ಪ್ರತಿಯೊಬ್ಬ ಕನ್ನಡಿಗರು ಸಂಭ್ರಮದಿಂದ ಆಚರಿಸುತ್ತಾರೆ. ಅದರೊಂದಿಗೆ ಈ ಬಾರಿ ಪ್ರತಿಯೊಬ್ಬ ಕನ್ನಡಿಗನೂ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ಧ್ಯೋತಕವಾದ ಕನ್ನಡದ ಧ್ವಜವನ್ನು ಸ್ವ-ಇಚ್ಛೆಯಿಂದ ಹೆಮ್ಮೆಯಿಂದ ಪ್ರತಿಯೋಬ್ಬರ ಮನೆಯ ಮೇಲೆ ಹಾರಿಸುವ ಮೂಲಕ ಕನ್ನಡದ ಹಬ್ಬವನ್ನು ಆಚರಿಸೋಣ. ನಾಡಿನಾದ್ಯಂತ ಎಲ್ಲೆಡೆಯೂ ಹಳದಿ ಕೆಂಪು ಬಣ್ಣವು ರಾರಾಜಿಸಲಿ, ಸ್ಫೂರ್ತಿಯ ಸೆಲೆ ಎಲ್ಲೆಡೆಯೂ ಪಸರಿಸಲಿ, ಎಲ್ಲರ ಮನ-ಮನೆಯಲ್ಲೂ ಕನ್ನಡತನ ಮೆರೆಯಲಿ ಎಂದು ನಾಡೋಜ ಡಾ. ಮಹೇಶ ಜೋಶಿ ಆಶಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ-ಕನ್ನಡಿಗ-ಕರ್ನಾಟಕ ಎನ್ನುವ ಧ್ಯೇಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಿಗರೆಲ್ಲರೂ ಉತ್ಸಾಹದಿಂದ ಕನ್ನಡಹಬ್ಬದಲ್ಲಿ ಪಾಲ್ಗೊಂಡು ನಾಡು ನುಡಿಯ ಸಮೃದ್ಧಿ ಶ್ರೀಮಂತಿಕೆ, ಉನ್ನತಿಯನ್ನು ಮೆರೆಯೋಣ. ಈ ಸಂದರ್ಭದಲ್ಲಿ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯೋತ್ಸವವನ್ನು ವೈಭವ ಪೂರ್ಣವಾಗಿ ಆಚರಿಸಬೇಕಾಗಿದೆ ಎಂದು ಹೇಳಿದ್ದಾರೆ.