ಶಿವಮೊಗ್ಗ: ಸಾಗರ ನಗರದಲ್ಲಿ ಆಗಸ್ಟ್.2ರಂದು 16ನೇ ಅವ್ವ ಸಂತೆ ನಡೆಯಲಿದೆ. ಶ್ರಾವಣ ಮಾಸದ ಸಂಭ್ರಮದ ನಡುವೆ ನಡೆಯುತ್ತಿರುವಂತ ಅವ್ವ ಸಂತೆಯಲ್ಲಿ ಶ್ರಾವಣ ಪೂಜಾ ವಸ್ತುಗಳು ಸೇರಿದಂತೆ ಇತರೆ ಉತ್ಪನ್ನಗಳು ಲಭ್ಯವಾಗಲಿದೆ ಎಂಬುದಾಗಿ ಜೀವನ್ಮುಖಿಯ ಪ್ರತಿಭಾ ರಾಘವೇಂದ್ರ ತಿಳಿಸಿದ್ದಾರೆ.
ಇಂದು ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರ ಜೀವನ್ಮುಖಿ ಹಾಗೂ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ನಿಯಮಿತದ ಮೂಲಕ ಆಗಸ್ಟ್.2ರಂದು 16ನೇ ಅವ್ವ ಸಂತೆ ನಡೆಸಲಾಗುತ್ತಿದೆ. ಸಾಗರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11 ಗಂಟೆಯಿಂದ ರಾತ್ರಿ 8ರವರೆಗೆ ನಡೆಯಲಿದೆ ಎಂದರು.
ಮಹಾ ಸಂತೆಯನ್ನು ವರ್ಷಕ್ಕೆ ಒಮ್ಮೆ ಮಾಡಲಾಗುತ್ತದೆ. ಮಳೆ ಹೆಚ್ಚಾಗಿರುವ ಕಾರಣ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಜೀವನ್ಮುಖಿ ಸಂಸ್ಥೆಯಲ್ಲಿ 128 ಸದಸ್ಯರು ಪ್ರಸ್ತುತ ಇದ್ದಾರೆ. ಅವರೆಲ್ಲರ ಸಹಕಾರದೊಂದಿಗೆ ಅವ್ವ ಸಂತೆ ನಡೆಯುತ್ತಿದೆ. ದೇಸಿ ತಿನಿಸಿಗಳು, ಜೋನಿ ಬೆಲ್ಲ, ಜೇನು ತುಪ್ಪ, ಎಣ್ಣೆ, ಗುಡಿ ಕೈಗಾರಿಕೆಯ ವಸ್ತುಗಳು ಅವ್ವ ಸಂತೆಯಲ್ಲಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಈಗ ಶ್ರಾವಣ ಮಾಸ. ಇಂತಹ ಮಾಸದಲ್ಲಿನ ಆಚರಣೆಗೆ ಬೇಕಿರುವಂತ ವಸ್ತುಗಳು ಅವ್ವ ಸಂತೆಯಲ್ಲಿ ಸಿಗಲಿವೆ. ಶಿರಸಿ, ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳಿಂದ ಮಹಿಳಾ ಗ್ರಾಮೋದ್ಯೋಗ ಸಂಘಗಳು ಅವ್ವ ಸಂತೆಯಲ್ಲಿ ಭಾಗಿಯಾಗಲಿದ್ದಾವೆ. ಇದಲ್ಲದೇ ಬೆಂಗಳೂರಿನ ಇಕ್ರಾ ಸಂಸ್ಥೆ ಕೂಡ ಈ ಬಾರಿಯ ಅವ್ವ ಸಂತೆಯಲ್ಲಿ ಪಾಲ್ಗೊಳ್ಳಲಿದೆ. ರಾಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡುವ ನಿಟ್ಟಿನಲ್ಲಿ ಬಿಳಿಜೋಳ, ನವಣೆ, ರಾಗಿ, ಬ್ಯಾಡಗಿ ಮೆಣಸಿನ ಕಾಯಿ ಸೇರಿದಂತೆ 50ಕ್ಕೂ ಹೆಚ್ಚು ಧವಸ ಧಾನ್ಯಗಳು ಪ್ರದರ್ಶನಗೊಳ್ಳಲಿವೆ ಎಂದರು.
ಚರಕ ಉತ್ಪನ್ನಗಳು ಅವ್ವ ಸಂತೆಯಲ್ಲಿ ಸಿಗಲಿವೆ. ಶೇ.10ರಷ್ಟು ರಿಯಾಯಿತಿ ದರ ಕೂಡ ಖರೀದಿಸುವ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಬಾರಿಯ ಅವ್ವ ಸಂತೆಯಲ್ಲಿ 22 ರಿಂದ 24 ಮಳಿಗೆಗಳು ಇರಲಿವೆ. ಅವ್ವ ಸಂತೆಯಲ್ಲಿ ಪಾಲ್ಗೊಳ್ಳುವಂತ ಮಹಿಳಾ ಗೃಹ ಉದ್ಯಮಿಗಳು ಸ್ಟಾಲ್ ಬುಕ್ ಮಾಡಲು 9945178792 ನಂಬರ್ ಗೆ ಕರೆ ಮಾಡಿ. ಮಳಿಗೆಗಳ ನಿರ್ವಹಣಾ ವೆಚ್ಚದ ದರವನ್ನು ಮಾತ್ರವೇ ವಿಧಿಸಲಾಗುತ್ತಿದೆ ಎಂಬುದಾಗಿ ತಿಳಿಸಿದರು.
ಜೀವನ್ಮುಖಿ ಸದಸ್ಯರು ತಯಾರಿಸುವ ರುಚಿ ರುಚಿಯಾದ ವೈವಿಧ್ಯಮಯ ಆಹಾರಗಳು, ಚರಕ ಸಂಸ್ಥೆಯ ಕೈಮಗ್ಗ ಹಾಗೂ ನೈಸರ್ಗಿಕ ಬಣ್ಣಗಾರಿಕೆಯ ಉತ್ಪನ್ನಗಳು ಹಾಗೂ ರಾಜ್ಯದ ಹಲವು ಭಾಗಗಳಿಂದ ಆಗಮಿಸುವ ಮಹಿಳಾ ಕುಶಲಕರ್ಮಿಗಳ ಮಳಿಗೆಗಳು ಒಂದೆಡೆ ಲಭ್ಯವಾಗಲಿದೆ. ಸಾಗರ ಜನತೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಅವ್ವ ಸಂತೆಯನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಪ್ಲಾಸ್ಟಿಕ್ ಮುಕ್ತ ಅವ್ವ ಸಂತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅವ್ವ ಸಂತೆಗೆ ಭಾಗಿಯಾಗುವಂತ ಸಾಗರ ಜನತೆ ಪಾರ್ಸಲ್ ತೆಗೆದುಕೊಂಡು ಹೋಗೋದಕ್ಕೆ ಕೈ ಚೀಲ ಹಾಗೂ ಡಬ್ಬಿಗಳನ್ನು ತರುವಂತೆ ಜೀವನ್ಮುಖಿ ಸಂಸ್ಥೆಯ ಪ್ರತಿಭಾ ರಾಘವೇಂದ್ರ ಮನವಿ ಮಾಡಿದ್ದಾರೆ.
16ನೇ ಅಪ್ಪ ಸಂತೆಯ ವಿಶೇಷತೆ ಏನು ಗೊತ್ತಾ?
- ಸ್ಥಳದಲ್ಲೇ ಸೇವಿಸಬಹುದಾದ ರುಚಿ ಶುಚಿಯಾದ ಶುದ್ಧದೇಸಿ ತಿನಿಸುಗಳು.
- ಮರದ ಗಾಣದ ಶುದ್ಧವಾದ ಶೇಂಗಾ ಮತ್ತು ಕೊಬ್ಬರಿಎಣ್ಣೆ, ಜೇನುತುಪ್ಪ, ಜೋನಿಬೆಲ್ಲ
- ಚಟೀಪುಡಿ, ಸಾಂಬಾರುಪುಡಿ, ತಿಳಿಸಾರಿನ ಪುಡಿ, ಇತ್ಯಾದಿ ಮಸಾಲಾ ಪದಾರ್ಥಗಳು.
- ಅಪರೂಪದ ಮಲೆನಾಡಿನ ಸಾಂಬಾರು ಪದಾರ್ಥಗಳು.
- ವೈವಿಧ್ಯಮಯ ಸಿರಿಧಾನ್ಯದ ಉತ್ಪನ್ನಗಳು.
- ಮಣ್ಣಿನ, ಲೋಹದ, ಬಟ್ಟೆಯ ಆಕರ್ಷಕ ವಿನ್ಯಾಸದ ಆಭರಣಗಳು, ಆಲಂಕಾರಿಕ ವಸ್ತುಗಳು, ಕೇಶವಿನ್ಯಾಸದ ಉತ್ಪನ್ನಗಳು.
- ಮಲೆನಾಡಿನ ವಿಶೇಷ ಉಪ್ಪಿನಕಾಯಿ, ಹಪ್ಪಳಗಳು ಇತ್ಯಾದಿ.
- ಉಡುಗೊರೆಗಳಿಗೆ ಹಾಗೂ ಗೃಹೋಪಯೋಗಕ್ಕೆ ವಿಶೇಷ ಆಕರ್ಷಕ ವಸ್ತುಗಳು.
- ಸೌಂದರ್ಯವರ್ಧಕಗಳು, ಬಿದಿರಿನ ಕೈ ಉತ್ಪನ್ನಗಳು.
- ಚರಕ ಸಂಸ್ಥೆಯ ಕೈಮಗ್ಗ ಹಾಗು ನೈಸರ್ಗಿಕ ಬಣ್ಣಗಾರಿಕೆಯ ವೈವಿಧ್ಯಮಯ ಉಪಯುಕ್ತ ಉತ್ಪನ್ನಗಳು ರಿಯಾಯಿತಿ ದರದಲ್ಲಿ.
- ಪುಸ್ತಕಗಳು, ಆಲಂಕಾರಿಕ ಕುಂಡಗಳು, ಗಿಡಗಳು
- ಸೀರೆಗಳು, ದೊಡ್ಡವರ ಮತ್ತು ಮಕ್ಕಳ ಉಡುಪುಗಳು ಇತ್ಯಾದಿ.
ವಿಶೇಷ ಆಹ್ವಾನಿತ ಮಳಿಗೆ
ICRA 1982 ರಲ್ಲಿ ಸ್ಥಾಪಿಸಿದ ಸಂಸ್ಥೆ, ಮಳೆಯಾವಲಂಬಿತ ಪ್ರದೇಶಗಳ ಸಣ್ಣ ರೈತರ ಸುಸ್ಥಿರ ಕೃಷಿಗೆ ನೆರವು ನೀಡುತ್ತಿದೆ. ನಾಡಿನ ನಾಲ್ಕು ಜಿಲ್ಲೆಗಳ 8 ತಾಲ್ಲೂಕಿನ ಸಣ್ಣ ರೈತರನ್ನು ಒಳಗೊಂಡು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗೆ ಬೆಂಬಲವಾಗಿದೆ. ಈ ರೈತ ಮಹಿಳೆಯರು ತಾವು ಬೆಳೆದ ದವಸಧಾನ್ಯ ಪದಾರ್ಥಗಳನ್ನು ಹೊತ್ತು ತಂದು ನೇರವಾಗಿ ಮಾರಾಟ ಮಾಡುವಂತೆ ಅವ್ವ ಅವರನ್ನು ಆಹ್ವಾನಿಸಿದೆ. ಅದಕ್ಕೆ ನಿಮ್ಮೆಲ್ಲರ ಬೆಂಬಲ ನಿರೀಕ್ಷಿಸುತ್ತಿದೆ.
ಈ ಸುದ್ದಿಗೋಷ್ಠಿಯ ವೇಳೆ ಜೀವನ್ಮುಖಿ ಸಂಸ್ಥಯ ಮಂಜುಳಾ ಎಎನ್, ಮಮತಾ ಜೈನ್, ಅಮೃತಾ ಕಾರ್ಗಲ್, ರೋಹಿಣಿ ಹೆಚ್.ಎಸ್ ಹಾಗೂ ಸೌಮ್ಯ ಎಸ್ ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು