ಬೆಂಗಳೂರು : ನನಗೆ ಕಿರುಕುಳ ನೀಡುವ ಉದ್ದೇಶದಿಂದ ದ್ವೇಷ ರಾಜಕಾರಣ ನಡೆಯುತ್ತಿದೆ. ಅಧಿಕಾರಿಗಳೂ ರಾಜಕೀಯ ಮಾಡುತ್ತಿದ್ದಾರೆ, ಮಾಡಲಿ. ಭಗವಂತ ಹಾಗೂ ನ್ಯಾಯಾಲಯದ ಮೇಲೆ ನನಗೆ ನಂಬಿಕೆಯಿದೆ. ಕಾಲಚಕ್ರ ಉರುಳಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ ಕಿಡಿ ಕಾರಿದ್ದಾರೆ.
ಇದು, ತಮ್ಮ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆದ ರಾಜ್ಯ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿರುವುದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳ ವಿರುದ್ಧ ಕೂಡ ಆಕ್ರೋಶ ಹೊರಹಾಕಿದರು.
ಈ ಸಂಬಂಧ ಶುಕ್ರವಾರ ವಿಧಾನಸೌಧ ದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ನಾಯಕರ ಮೇಲೂ ಇದೇ ರೀತಿ ಪ್ರಕರಣಗಳು ಇದ್ದರೂ ಅವರ ಮೇಲೆ ಯಾವುದೇ ಕ್ರಮ ಇಲ್ಲ. ನನಗೆ ಕಿರುಕುಳ ನೀಡುವುದಕ್ಕೂ ಒಂದು ಮಿತಿ ಇದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದುನನಗೆ ಗೊತ್ತಿದೆ. ರಾಜ್ಯಸಭೆಗೆ ಅಹ್ಮದ್ ಪಟೇಲ್ ಅವರು ಸ್ಪರ್ಧಿಸಿದ್ದಾಗ ನಾನು ನಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಿದ್ದಕ್ಕೆ ನನ್ನ ಮೇಲೆ ದಾಳಿ ನಡೆಯುತ್ತಿದೆ ಎಂದರು.
ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿ ಯನ್ನು ಹಿಂಪಡೆದ ನಂತರವೂ ನನ್ನ ಕುಟುಂಬದ ಸದಸ್ಯರು, ನನ್ನ ಸಂಸ್ಥೆ, ನನ್ನ ಜತೆ ವ್ಯವಹಾರ ಹೊಂದಿದ್ದವರಿಗೆ ನೋಟಿಸ್ ನೀಡಲಾಗಿದೆ. ಅವರ ಉದ್ದೇಶ ಏನು ಎಂಬುದೇ ಗೊತ್ತಾಗುತ್ತಿಲ್ಲ ಎಂದರು.