ಹುಬ್ಬಳ್ಳಿ : ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸಪ್ಟೆಂಬರ್ 5 ರಿಂದ 10ರ ವರೆಗೆ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಹೌದು ಈ ಕುರಿತಂತೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ಮಾಹಿತಿ ನೀಡಿದ್ದು, ಗೌರಿ-ಗಣೇಶ ಹಬ್ಬದ ಆಚರಣೆಗೆ ಆಗಮಿಸುವವರು ಹಾಗೂ ರಜೆ ಮುಗಿಸಿ ಹಿಂದಿರುಗುವವರು ಸೇರಿ ಮತ್ತಿತರ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸಪ್ಟೆಂಬರ್ 5 ರಿಂದ 10ರ ವರೆಗೆ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಸೆಪ್ಟೆಂಬರ್ 6ರಂದು ಶುಕ್ರವಾರ ಗೌರಿ ಹಬ್ಬ, 7ರಂದು ಶನಿವಾರ ಗಣೇಶ ಚತುರ್ಥಿ ಹಾಗೂ 8ರಂದು ಭಾನುವಾರ ಸಾರ್ವಜನಿಕ ರಜೆ ಇರುತ್ತದೆ. ಹಬ್ಬದ ಆಚರಣೆಗಾಗಿ ಬೆಂಗಳೂರು, ಮಂಗಳೂರು, ಪುಣೆ, ಮುಂಬೈ, ಗೋವಾ ಮತ್ತಿತರ ಪ್ರಮುಖ ಊರುಗಳಲ್ಲಿ ನೆಲೆಸಿರುವ ಹಲವರು ಹಬ್ಬದ ಆಚರಣೆಗಾಗಿ ಸ್ವಂತ ಊರುಗಳಿಗೆ ಆಗಮಿಸಲಿದ್ದಾರೆ. ಅವರ ಅನುಕೂಲಕ್ಕಾಗಿ ಸಪ್ಟೆಂಬರ್ 5 ರಿಂದ 10ರವರೆಗೆ ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಅದಕ್ಕಾಗಿ ವೋಲ್ವೋ ಎಸಿ ಐರಾವತ, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ರಾಜಹಂಸ ಹಾಗೂ ವೇಗಧೂತ ಸಾರಿಗೆಗಳು ಸೇರಿದಂತೆ ವಿವಿಧ ಮಾದರಿಯ ಬಸ್ಗಳನ್ನು ನಿಯೋಜಿಸಲಾಗಿದೆ.ಹಬ್ಬದ ಆಚರಣೆಗಾಗಿ ಆಗಮಿಸುವವರ ಅನುಕೂಲಕ್ಕಾಗಿ ಸೆಪ್ಟೆಂಬರ್ 5 ಮತ್ತು 6 ರಂದು ಬೆಂಗಳೂರು, ಮಂಗಳೂರು, ಪುಣೆ, ಗೋವಾ ಮತ್ತಿತರ ಪ್ರಮುಖ ಸ್ಥಳಗಳಿಂದ ಹುಬ್ಬಳ್ಳಿಗೆ ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಅಡ್ವಾನ್ಸ್ ಬುಕ್ಕಿಂಗ್ ಮಾಡಿದವರಿಗೆ ಸಿಗಲಿದೆ ಈ ಆಫರ್!
ಹಬ್ಬದ ವಿಶೇಷ ಬಸ್ಸುಗಳಿಗೆ https://www.ksrtc.in ಅಥವಾ KSRTC Mobile App ಹಾಗೂ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದೇ ಟಿಕೆಟ್ನಲ್ಲಿ ನಾಲ್ಕು ಅಥವಾ ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣದರದಲ್ಲಿ ಶೇಕಡಾ 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.