ಶಿವಮೊಗ್ಗ: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 18,000 ಶಿಕ್ಷಕರ ನೇಮಕಾತಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ 12,000, ಅನುದಾನಿತ ಶಾಲೆಗಳ 6 ಸಾವಿರ ಸೇರಿ 18,000 ಶಿಕ್ಷಕರ ನೇಮಕಾತಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಸರ್ಕಾರ ಅತಿಥಿ ಶಿಕ್ಷಕರ ನೇಮಕ ಮಾಡಲು ನಿರ್ಧರಿಸಿದೆ. ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ನಾಲ್ಕರಿಂದ ಐದು ಸಾವಿರ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಆಯಾ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಿದ್ದು, ಸರ್ಕಾರದಿಂದಲೇ ಗೌರವ ಧನ ಪಾವತಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಸಮಸ್ಯೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ನಾನಾ ಕಾರಣಗಳಿವೆ. ಆದರೆ, ಮುಂದೆ ಈ ರೀತಿ ಸಮಸ್ಯೆ ಉಲ್ಬಣಗೊಳ್ಳಬಾರದು ಎಂಬ ಕಾರಣಕ್ಕೆ ಸರ್ಕಾರಿ ಶಾಲೆಯಲ್ಲೇ ಎಲ್ಲೆಜಿ, ಯುಕೆಜಿಯನ್ನು ಆರಂಭಿಸಲಾಗಿದೆ. ಸದ್ಯ ಈ ವರ್ಷ ರಾಜ್ಯದಲ್ಲಿ 5 ಸಾವಿರ ಶಾಲೆಗಳಲ್ಲಿ ಮಾತ್ರ ಪ್ರಾರಂಭಿಸಲಾಗಿದೆ. ಮುಂದಿನ ವರ್ಷ ಇನ್ನೂ 10 ಸಾವಿರ ಶಾಲೆಗಳಲ್ಲಿ ಎಲ್ಲೆಜಿ, ಯುಕೆಜಿ ಆರಂಭಮಾಡಲಾಗುತ್ತಿದೆ. ಹೀಗೆ ಹಂತ ಹಂತವಾಗಿ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಎಲ್ಲೆಜಿ, ಯುಕೆಜಿ ಆರಂಭಿಸಲಾಗುವುದು. ಇದರಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.