ಬೆಂಗಳೂರು : ಬೆಂಗಳೂರಿನಲ್ಲಿ ದೊಡ್ಡ ಸಮಸ್ಯೆಯೆಂದರೆ ಟ್ರಾಫಿಕ್ ಜಾಮ್. ಕೆಲವು ಪ್ರದೇಶಗಳಲ್ಲಂತೂ ಇದು ಅತೀ ಹೆಚ್ಚಾಗಿದೆ. ಅಂತಹ 10 ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚನೆ ನೀಡಿದ್ದಾರೆ.
ಸೋಮುವಾರ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಸಿಲಿಕಾನ್ ಸಿಟಿಯ 10 ಮಹತ್ವದ ಟ್ರಾಫಿಕ್ ಜಂಕ್ಷನ್ಗಳಿಂದ ಅಡೆತಡೆಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆಯಿಂದ ಕೂಡಿರುವ ಪ್ರಮುಖ ಪ್ರದೇಶಗಳಾದ ಸಿಲ್ಕ್ ಬೋರ್ಡ್, ಇಬ್ಲೂರು, ಜಯದೇವ, ಟಿನ್ ಫ್ಯಾಕ್ಟರಿಯ ಎಂಎಂ ಟೆಂಪಲ್ ಜಂಕ್ಷನ್, ಹೆಬ್ಬಾಳ, ಗೊರಗುಂಟೆಪಾಳ್ಯ, ಸಾರಕ್ಕಿ, ಕೆಎಸ್ ಲೇಔಟ್, ಕಾಡುಬೀಸನಹಳ್ಳಿ, ಬನಶಂಕರಿಯಲ್ಲಿ ಟ್ರಾಫಿಕ್ ಅಡಚಣೆಗಳನ್ನು ನಿವಾರಿಸಲು ಸೂಚಿಸಿದ್ದಾರೆ.
ನಗರ ಪೊಲೀಸರು, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL), ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ (BWSSB), ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆಗೆ ವಂದಿತಾ ಶರ್ಮಾ ಸಂಚಾರ ನಿಯಂತ್ರಣ ಕುರಿತು ಚರ್ಚೆ ನಡೆಸಿದ್ದಾರೆ.
ವಾರ್ಡ್ ರಸ್ತೆಗಳು, ಸಬ್ ಆರ್ಟಿರಿಯಲ್ ಮತ್ತು ಆರ್ಟಿರಿಯಲ್ ರಸ್ತೆಗಳಲ್ಲಿನ ಗುಂಡಿಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಂಚಾರಿ ಪೊಲೀಸರು ಮಳೆಗಾಲದಲ್ಲಿ ನೀರು ಸಂಗ್ರಹಗೊಂಡು ವಾಹನ ಸವಾರರಿಗೆ ತೊಂದರೆಯಾಗುವ ಸ್ಥಳಗಳನ್ನು ಪತ್ತೆ ಹಚ್ಚಿದ್ದು, ಅವುಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಜೊತೆಗೆ ರಸ್ತೆಯ ಮೇಲ್ಮೈಗಿಂತ ಎತ್ತರದಲ್ಲಿರುವ ಮ್ಯಾನ್ಹೋಲ್ಗಳ ಪರಿಣಾಮವಾಗಿ ಅಪಘಾತಗಳು ಸಂಭವಿಸಬಹುದು ಎನ್ನಲಾಗಿದೆ. ಪೊಲೀಸ್ ಕಮಿಷನರ್ ಸಿ. ಎಚ್. ಪ್ರತಾಪ್ ರೆಡ್ಡಿ ಪ್ರಕಾರ ಸಂಚಾರ ಪೊಲೀಸರು ಒಟ್ಟು 112 ಮ್ಯಾನ್ ಹೋಲ್ಗಳನ್ನು ಪತ್ತೆ ಮಾಡಿದ್ದಾರೆ.
112 ಮ್ಯಾನ್ ಹೋಲ್ಗಳ ಪೈಕಿ 53 ಮ್ಯಾನ್ಹೋಲ್ಗಳನ್ನು ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳು ಸರಿಪಡಿಸಿದ್ದಾರೆ. ಉಳಿದ 59 ಮ್ಯಾನ್ ಹೋಲ್ಗಳನ್ನು ತಕ್ಷಣವೇ ಸರಿಪಡಿಸಲು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ನಗರದ ರಸ್ತೆಗಳಿಗೆ ಡಾಂಬರೀಕರಣ, 210 ಪ್ರದೇಶಗಳಲ್ಲಿ ಬೀದಿ ದೀಪಗಳ ಅಳವಡಿಕೆ, 33 ಬ್ಲಾಕ್ ಸ್ಪಾಟ್ಗಳ ನಿರ್ಮೂಲನೆ, ರಸ್ತೆಗಳಲ್ಲಿನ ನಿರ್ಮಾಣ ಅವಶೇಷಗಳನ್ನು ತೆರವುಗೊಳಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಶೀಘ್ರವಾಗಿ ನಡೆಸಲು ಮುಖ್ಯ ಕಾರ್ಯದರ್ಶಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.