ಬೆಂಗಳೂರು : ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ದಿನಾಂಕ:17-08-2024 ರಿಂದ 19-08-2024 ರವರೆಗೆ (ಮೂರು ದಿನ) ನಡೆಸಲು ರಾಜ್ಯ ಸರ್ಕಾರಿ ನೌಕರರ ಸಂಘವು ತೀರ್ಮಾನಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ 2023-24ನೇ ಸಾಲಿನ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನ ಸಂಬಂಧ ದಿನಾಂಕ:03-06-2024ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಕ್ರೀಡಾಕೂಟವನ್ನು ಶಿವಮೊಗ್ಗ ನಗರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಸದರಿ ಕ್ರೀಡಾಕೂಟವನ್ನು ಬೆಂಗಳೂರು ನಗರದಲ್ಲಿ ದಿನಾಂಕ:17-08-2024 ರಿಂದ 19-08-2024 ರವರೆಗೆ (ಮೂರು ದಿನ) ನಡೆಸಲು ರಾಜ್ಯ ಸರ್ಕಾರಿ ನೌಕರರ ಸಂಘವು ತೀರ್ಮಾನಿಸಲಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಅದರಂತೆ ಸದರಿ ಕ್ರೀಡಾಕೂಟವನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಆಯೋಜಿಸಲು ಈ ಕೆಳಕಂಡಂತೆ ಸೂಚಿಸಿ ಸುತ್ತೋಲೆಯನ್ನು ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ನಿಯಮಾವಳಿಗಳು:
- ಸದರಿ ಕ್ರೀಡಾಕೂಟದಲ್ಲಿ ರಾಜ್ಯ ಸರ್ಕಾರದ ಎಲ್ಲಾ ಖಾಯಂ ನೌಕರರು ಭಾಗವಹಿಸಲು ಅರ್ಹರಾಗಿರುತ್ತಾರೆ.
- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿನ ತರಬೇತುದಾರರು, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕ್ರೀಡಾಕೋಟಾದಡಿ ನೇಮಕಗೊಂಡ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
- ಎಲ್ಲಾ ಕ್ರೀಡಾಪಟುಗಳು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಕ್ರೀಡೆಯಲ್ಲಿ ಭಾಗವಹಿಸಲು ನೀಡಿರುವ ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
- ಸಂಗೀತ, ನೃತ್ಯ ಮತ್ತು ಕಲಾ ಶಿಕ್ಷಕರು, ಸಂಗೀತ, ನೃತ್ಯ ಮತ್ತು ಕರಕುಶಲ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ.
- ದಿನಗೂಲಿ ನೌಕರರು, ಅರೆಕಾಲಿಕ ನೌಕರರು, ಕ್ಷೇಮಾಭಿವೃದ್ಧಿ ನೌಕರರು, ಗುತ್ತಿಗೆ ನೌಕರರು, ನಿಗಮ/ಮಂಡಳಿ ನೌಕಕರು ಮತ್ತು ಇತರೇ ಖಾಯಂ ಅಲ್ಲದ ನೌಕರರು ಭಾಗವಹಿಸಲು ಅರ್ಹರಾಗಿರುವುದಿಲ್ಲ.
- , ಅರಣ್ಯ ಇಲಾಖೆಗಳಲ್ಲಿ ಸಮವಸ್ತ್ರ, ವೃಂದಕ್ಕೆ ಪ್ರತ್ಯೇಕ ಕ್ರೀಡಾಕೂಟಗಳಿರುವುದರಿಂದ ಈ ಎರಡೂ ಇಲಾಖೆಗಳ ಕಛೇರಿ ಹಾಗೂ ಲಿಪಿಕ ನೌಕರರು/ಕಛೇರಿ ಸಿಬ್ಬಂದಿ ಮಾತ್ರ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿದೆ.
- ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಅಬಕಾರಿ, ಅರಣ್ಯ, ಅಗ್ನಿಶಾಮಕ ಇಲಾಖೆಗಳ ಕ್ರೀಡಾ ಕೋಟಾದಡಿ ನೇಮಕವಾದ ನೌಕರರು ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
- 1 ಟ್ರ್ಯಾಕ್ ಮತ್ತು 2 ಫೀಲ್ಡ್ ಅಥವಾ 2 ಟ್ರ್ಯಾಕ್ ಮತ್ತು 1 ಫೀಲ್ಡ್ ಸೇರಿ ಒಟ್ಟು ಮೂರು ಆಟಗಳಲ್ಲಿ ಮಾತ್ರ ಭಾಗವಹಿಸತಕ್ಕದ್ದು.
- 45 ವರ್ಷ ಮೇಲ್ಪಟ್ಟ ಸ್ಪರ್ಧಿಗಳು 45 ವರ್ಷಕ್ಕೊಳಪಟ್ಟವರಿಗೆ ಇರುವ ಸ್ಪರ್ಧೆಗಳಲ್ಲಿ ಸ್ವಂತ ಜವಾಬ್ದಾರಿ ಮೇಲೆ ಭಾಗವಹಿಸಬಹುದು. 45 ವರ್ಷಕ್ಕೊಳಪಟ್ಟವರು 45 ವರ್ಷ ಮೇಲ್ಪಟ್ಟವರ ಜೊತೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
- ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ, ತಕರಾರಿಗೆ ಅವಕಾಶವಿರುವುದಿಲ್ಲ.
- ಏಕಕಾಲದಲ್ಲಿ ಸ್ಪರ್ಧೆಗಳನ್ನು ನಡೆಸಲಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧಿಗಳನ್ನು ಕಾಯುವುದಿಲ್ಲ.
- ಕರಕುಶಲ ವಸ್ತು ಪ್ರದರ್ಶನದಲ್ಲಿ ಸಿದ್ಧವಿರುವ ವಸ್ತುಗಳ ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ. ಸ್ಥಳದಲ್ಲಿ ತಯಾರಾಗಿ (ಮೊದಲನೇ ದಿನ) ಇಡಬೇಕು. 2ನೇ ದಿನ ತೀರ್ಪುಗಾರರಿಂದ ಪರಿಶೀಲಿಸಲಾಗುವುದು.
- ಸ್ಪರ್ಧೆ ನಡೆಯದ ಕ್ರೀಡೆಗಳಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಕ್ರೀಡಾ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ನೀಡಲಾಗುವುದಿಲ್ಲ.
- ಸಂಘಟಕರೊಡನೆ ಅಥವಾ ತೀರ್ಪುಗಾರರೊಡನೆ ಅಸಭ್ಯವಾಗಿ ವರ್ತಿಸುವ ಕ್ರೀಡಾಪಟುಗಳನ್ನು ಕ್ರೀಡಾ ಸ್ಪರ್ಧೆಯಿಂದ ಹೊರಹಾಕುವುದಲ್ಲದೆ. ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತಂದು ತಪ್ಪಿತಸ್ಥ ಕ್ರೀಡಾಪಟುವಿನ ಮೇಲೆ ಸೇವಾ ನಿಯಮಗಳ ರೀತ್ಯಾ ಶಿಸ್ತಿನ ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗುವುದು.
- ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸ್ಪರ್ಧೆ ಪ್ರಾರಂಭವಾಗುವ ನಿಗಧಿತ ಸಮಯಕ್ಕೆ ಕನಿಷ್ಠ 1.00 ಗಂಟೆ ಮುಂಚಿತವಾಗಿ ಹಾಜರಿದ್ದು, ಕ್ರೀಡಾ ಸಂಘಟಕನಾಧಿಕಾರಿಗಳಲ್ಲಿ ವರದಿ ಮಾಡಿಕೊಳ್ಳತಕ್ಕದ್ದು.
- ಕ್ರೀಡಾ ಸ್ಪರ್ಧೆಗಳಲ್ಲಿ ಸಂಗೀತ, ನೃತ್ಯ ಹಾಗೂ ನಾಟಕಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ತಮ್ಮದೇ ಆದ ಸಲಕರಣೆಗಳನ್ನು ತರತಕ್ಕದ್ದು.
- ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಚಲನಚಿತ್ರ ಗೀತೆಯ ತುಣುಕು ಇತ್ಯಾದಿಗಳಿಗೆ ಅವಕಾಶವಿಲ್ಲ.(ಫಿಲಂಟ್ಯೂನ್)
- ಸಂಗೀತ, ನೃತ್ಯ, ಚೆಸ್ ಮತ್ತು ನಾಟಕ ಸ್ಪರ್ಧೆಗಳಲ್ಲಿ ಪ್ರತ್ಯೇಕವಾಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸ್ಪರ್ಧೆಗಳು ಇರುವುದಿಲ್ಲ.
- ಸ್ಪರ್ಧಿಗಳು ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಆಯಾ ಜಿಲ್ಲೆಯ ಬಾವುಟದೊಂದಿಗೆ ಭಾಗವಹಿಸುವುದು ಕಡ್ಡಾಯವಾಗಿದೆ. ಉದ್ಘಾಟನಾ ಸಮಾರಂಭಕ್ಕೆ ಮೊದಲು ನೋಂದಾವಣೆ ಮಾಡಿಕೊಳ್ಳುವ ಕ್ರೀಡಾಪಟುಗಳಿಗೆ ಮಾತ್ರ ಹಾಜರಾತಿ ನೀಡಲಾಗುವುದು.
- ಸರ್ಕಾರಿ ಆದೇಶ ಸಂ:ಎಫ್‌ಡಿ2/ಎಸ್‌ಆರ್‌ಎಸ್/2002, ಬೆಂಗಳೂರು, ದಿನಾಂಕ:27-11-2002ರಂತೆ ರಾಜ್ಯ ಸರ್ಕಾರದ ವತಿಯಿಂದ ನಡೆಸುವ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮತ್ತು ಪ್ರಯಾಣ ಭತ್ಯೆ ಸೌಲಭ್ಯಗಳನ್ನು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿದೆ.
- ಒಬ್ಬ ಸರ್ಕಾರಿ ನೌಕರನು ಹಲವು ಕ್ರೀಡೆಗಳಲ್ಲಿ ಭಾಗವಹಿಸಲು ನೋಂದಾಯಿಸಿದ್ದರು ಸಹ ಒಂದು ಜೊತೆ ಕ್ರೀಡಾ ಸಮವಸ್ತ್ರ/ಟ್ರ್ಯಾಕ್ ಸೂಟ್ ನೀಡಲು ಕ್ರಮವಹಿಸುವುದು.
- ಯಾವ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಿರುವುದಿಲ್ಲವೋ ಅಂತಹ ಸ್ಪರ್ಧೆಗಳಿಗೆ ಕ್ರೀಡಾಪಟುವಲ್ಲದ ನೌಕರರನ್ನು ಸೇರ್ಪಡೆಗೊಳಿಸುವ ಕ್ರಮವನ್ನು ಕೈಬಿಡುವುದು. ಒಂದು ವೇಳೆ ತಪ್ಪು ಮಾಹಿತಿ ನೀಡಿರುವುದು ಕಂಡುಬಂದಲ್ಲಿ ಅಂತಹ ಸಹಾಯಕ ನಿರ್ದೇಶಕರು ಹಾಗೂ ನೌಕರರ ವಿರುದ್ಧ ಶಿಸ್ತು ಕ್ರಮ ಅನಿವಾರ್ಯವಾಗಲಿದೆ ಎಂಬ ಅಂಶವನ್ನು ಸ್ಪಷ್ಟಪಡಿಸುವುದು