ಬೇಸಿಗೆಯ ಬಿಸಿಲಿನ ತಾಪಮಾನದಿಂದ ಅಡಿಕೆಯನ್ನು ಬಿಸಿಲಿನಿಂದ ರಕ್ಷಿಸಲು ಸುಣ್ಣವನ್ನು ಬಳಿಯಬೇಕಾಗಿದ್ದು ಪ್ರಸಕ್ತ ಮಾಹೆ ಅಥವಾ ಡಿಸೆಂಬರ್ ಮಾಹೆ ಸೂಕ್ತವಾಗಿರುತ್ತದೆ.
ಸುಣ್ಣ 10 ಕೆ ಜಿ, ಮೈದಾಹಿಟ್ಟು 500 ಗ್ರಾಂ ಮತ್ತು ಬೆಲ್ಲ 500 ಗ್ರಾಂ ತೆಗೆದುಕೊಂಡು ಸುಣ್ಣವನ್ನು ಸುಮಾರು 20 ರಿಂದ 25 ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ನೆನೆಸಿ, ಸುಣ್ಣದ ನೀರು ತಯಾರಿಸಬೇಕು. ಸುಣ್ಣವು ಚೆನ್ನಾಗಿ ಕರಗಿ ಪೇಂಟ್ ಮಾಡುವ ಹದಕ್ಕೆ ಬಂದಿರಬೇಕು.
ಮೈದಾ ಹಿಟ್ಟು ಮತ್ತು ಬೆಲ್ಲವನ್ನು ಸ್ವಲ್ಪ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ಅಥವಾ ಬಿಸಿ ಮಾಡಿ, ದಪ್ಪ ಅಂಟು ರೀತಿಯ ಮಿಶ್ರಣ ತಯಾರಿಸಿ(ಈ ಅಂಟು ಸುಣ್ಣವನ್ನು ಗಿಡದ ಕಾಂಡಕ್ಕೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ)
ಬೆಲ್ಲ ಮತ್ತು ಮೈದಾಹಿಟ್ಟಿನ ಅಂಟನ್ನು, ಮೊದಲೇ ತಯಾರಿಸಿಕೊಂಡಿರುವ ಸುಣ್ಣದ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಪೇಂಟ್ ಮಾಡುವ ಹದಕ್ಕೆ ತಂದು, ಅಡಿಕೆ ಗಿಡಗಳ ಕಾಂಡಕ್ಕೆ ನೆಲಮಟ್ಟದಿಂದ ಎಲೆಗಳ ಕೆಳಭಾಗದವರೆಗೆ ಸುಣ್ಣವನ್ನು ಬಳಿಯಬೇಕು ಎಂದು ಶಿಕಾರಿಪುರ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.








