ಸಿಯೋಲ್:ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಶ್ಚಿಮ ಏಷ್ಯಾದಲ್ಲಿ ಇರಾನ್ ಜೊತೆಗಿನ ಕದನ ವಿರಾಮವನ್ನು ಘೋಷಿಸಿ ಶಾಂತಿ ಮಾತುಕತೆಗೆ ಒತ್ತು ನೀಡುತ್ತಿದ್ದರೆ, ಇತ್ತ ಉತ್ತರ ಕೊರಿಯಾ ಸತತವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಮೂಲಕ ಜಾಗತಿಕ ಆತಂಕವನ್ನು ಹೆಚ್ಚಿಸಿದೆ.
ದಕ್ಷಿಣ ಕೊರಿಯಾ ಮಿಲಿಟರಿ ಮೂಲಗಳ ಪ್ರಕಾರ, ಉತ್ತರ ಕೊರಿಯಾ ಬುಧವಾರ ಮುಂಜಾನೆ ಮತ್ತು ಮಧ್ಯಾಹ್ನ ಸತತವಾಗಿ ಹಲವು ಅಲ್ಪ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪೂರ್ವ ಸಮುದ್ರದತ್ತ (Sea of Japan) ಉಡಾಯಿಸಿದೆ.
ಮುಂಜಾನೆ ಉಡಾವಣೆಯಾದ ಕ್ಷಿಪಣಿಗಳು ಸುಮಾರು 240 ಕಿ.ಮೀ ಕ್ರಮಿಸಿದ್ದರೆ, ಮಧ್ಯಾಹ್ನ ಉಡಾವಣೆಯಾದ ಮತ್ತೊಂದು ಕ್ಷಿಪಣಿಯು ಸುಮಾರು 700 ಕಿ.ಮೀ ದೂರ ಸಾಗಿ ಜಪಾನ್‌ನ ವಿಶೇಷ ಆರ್ಥಿಕ ವಲಯದ ಹೊರಗೆ ಬಿದ್ದಿದೆ.ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಶಾಂತಿ ಸ್ಥಾಪಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ಉತ್ತರ ಕೊರಿಯಾ ಮತ್ತೊಮ್ಮೆ ತಿರಸ್ಕರಿಸಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಪ್ರಚೋದನಾಕಾರಿ ಕ್ರಮವನ್ನು ಅಮೆರಿಕ ಮತ್ತು ಜಪಾನ್ ತೀವ್ರವಾಗಿ ಖಂಡಿಸಿವೆ. “ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿರುವ ಈ ಕೃತ್ಯವು ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರಲಿದೆ” ಎಂದು ಜಪಾನ್ ಪ್ರತಿಭಟನೆ ದಾಖಲಿಸಿದೆ.







