ಬೆಂಗಳೂರು : ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್, ನಾಡಿನ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಭಾರತಕ್ಕೆ ಐತಿಹಾಸಿಕ ದಿನವಾಗಿದೆ. ಸಂವಿಧಾನವು ಭಾರತದ ನಾಗರೀಕರಿಗೆ ನ್ಯಾಯ, ಸ್ವಾತಂತ್ರ್ಯ, ಹಾಗೂ ಸಮಾನತೆಯ ಅವಕಾಶವನ್ನ ಒದಗಿಸಿದೆ. ಸಮಗ್ರತೆ, ಏಕತೆಯನ್ನ ಕಾಪಾಡುವ ಜೊತೆಗೆ ಸ್ವಾಭಿಮಾನದ ಜೀವನ ಒದಗಿಸುವ ಧ್ಯೇಯವನ್ನ ಹೊಂದಿದೆ. ಸರ್ಕಾರವು 5 ಗ್ಯಾರೆಂಟಿಗಳನ್ನ ಜಾರಿಗೊಳಿಸುವ ಭರವಸೆ ನೀಡಿತ್ತು. ಅದರಂತೆ ಎಲ್ಲ ಐದು ಗ್ಯಾರೆಂಟಿಗಳನ್ನ ಅನುಷ್ಠಾನಗೊಳಿಸಲಾಗಿದೆ ಎಂದರು.
ಶಕ್ತಿ & ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಮಾಸಿಕ ರೂ,2,000 ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.ಇದು ನಮ್ಮ ಪಕ್ಷದ ಬದ್ಧತೆ ಕೂಡಾ ಆಗಿದೆ. ಭರವಸೆಗಳನ್ನು ನೀಡಿ ಚುನಾವಣೆಯಲ್ಲಿ ಗೆದ್ದು ಬಂದಿರುವ ನಮಗೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ. ಇದನ್ನು ನಾವು ಮರೆತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳ ಭರವಸೆಯ ಈಡೇರಿಕೆಗೆ ಮೊದಲ ಸಚಿವ ಸಂಪುಟದಲ್ಲಿಯೇ ತಾತ್ವಿಕ ಅಂಗೀಕಾರ ಪಡೆದು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೆವು.
ಇದರ ಫಲವಾಗಿ ಇಂದು ಐದು ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿವೆ ಎನ್ನುವುದನ್ನು ನಿಮ್ಮ ಮುಂದೆ ಹೇಳಲು ಹೆಮ್ಮೆ ಪಡುತ್ತೇನೆ. ದೇಶದ ಯಾವುದೇ ರಾಜ್ಯ ಸರ್ಕಾರ ಕೂಡಾ ಇಂತಹದ್ದೊಂದ ಸಾಧನೆ ಮಾಡಿಲ್ಲ ಎನ್ನುವುದನ್ನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ. ಇದು ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ಕೊಟ್ಟಿರುವ ಶಕ್ತಿ ಎನ್ನುವುದನ್ನು ನಾವು ಮರೆತಿಲ್ಲ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ನಮ್ಮ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಗ್ಯ, ಋಣಮುಕ್ತಭಾಗ್ಯ, ವಿದ್ಯಾಸಿರಿ, ಆರೋಗ್ಯಭಾಗ್ಯ, ಜಲಭಾಗ್ಯ ಕಾರ್ಯಕ್ರಮಗಳು ಕೂಡಾ ಯಶಸ್ವಿಯಾಗಿ ಜಾರಿಯಲ್ಲಿದೆ. ಇವೆಲ್ಲ ಯೋಜನೆಗಳು ದುಡಿಯುವ ಕೈಗಳನ್ನು ಇನ್ನಷ್ಟು ಬಲಪಡಿಸಿ ಅವುಗಳು ರಾಜ್ಯದ ಅಭಿವೃದ್ಧಿಗೆ ಬಳಕೆಯಾಗುವಂತೆ ಮಾಡುವ ಕಾರ್ಯಕ್ರಮಗಳು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 1.2 ಕೋಟಿ ಕುಟುಂಬಗಳಿಗೆ ವಾರ್ಷಿಕ 50 ರಿಂದ 60 ಸಾವಿರ ರೂ.ಗಳ ಆರ್ಥಿಕ ಸಹಾಯ ದೊರೆಯುತ್ತಿದೆ.
ಅಧಿಕಾರಕ್ಕೆ ಬಂದ ಕೂಡಲೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಮಾಡಲು ಅನುವು ಮಾಡಿಕೊಟ್ಟ ಶಕ್ತಿ ಯೋಜನೆ ಅಭೂತಪೂರ್ವ ಜನಮನ್ನಣೆಗೆ ಪಾತ್ರವಾಗಿದೆ. 138 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಪ್ರಯಾಣಿಸಿದ್ದಾರೆ. 1.18 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2,000 ರೂ.ಗಳ ನೆರವು ನೀಡಲಾಗುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ 1.51 ಕೋಟಿ ಜನರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ಎಸ್.ಸಿ.ಎಸ್.ಪಿ/ಟಿ.ಎಸ್ಪಿ ಅಧಿನಿಯಮ 2013ರಡಿ ಹಂಚಿಕೆಯಾಗುವ ಅನುದಾನ ಆ ಸಮುದಾಯಗಳಿಗೇ ಬಳಕೆಯಾಗಬೇಕೆನ್ನುವುದು ಸರ್ಕಾರದ ಆಶಯ. ಈ ಬಗ್ಗೆ ದಲಿತ ಸಮುದಾಯಗಳ ದೀರ್ಘಕಾಲದ ಮನವಿಗೆ ಸರ್ಕಾರ ಸ್ಪಂದಿಸಿ ಕಾಯ್ದೆಯ ಕಲಂ 7 (ಡಿ) ಅನ್ನು ಕೈಬಿಡಲಾಗಿದೆ. ಹಿಂದುಳಿದ ಪ್ರವರ್ಗ-1 ಮತ್ತು ಪ್ರವರ್ಗ-2ಎ ಗಳಲ್ಲಿನ ಜಾತಿಗಳ ಜನರಿಗೆ ಕಾಮಗಾರಿಗಳ ಗುತ್ತಿಗೆಯಲ್ಲಿ 1 ಕೋಟಿ ರೂಗಳವರೆಗೆ ಮೀಸಲಾತಿ ನೀಡಲಾಗಿದೆ. ಇದು ಸಾಮಾಜಿಕ ನ್ಯಾಯದ ಬಂಡಿ ಮೇಲೆ ಅಭಿವೃದ್ದಿಯ ರಥವನ್ನು ಮುಂದಕ್ಕೆ ಒಯ್ಯುವ ನಮ್ಮ ಪ್ರಯತ್ನವಾಗಿದೆ.ಈ ಬಾರಿ ಹವಾಮಾನ ವೈಪರೀತ್ಯ, ಮಳೆಯ ತೀವ್ರ ಕೊರತೆಯಿಂದಾಗಿ, 236 ರಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಬರಗಾಲವನ್ನು ನಮ್ಮ ಸರ್ಕಾರ ಯಶಸ್ವಿಯಾಗಿ ನಿಭಾಯಿಸುತ್ತಿದೆ. ನಮ್ಮ ನಿರಂತರ ಪ್ರಯತ್ನದ ಹೊರತಾಗಿಯೂ ಬರಪರಿಹಾರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸದೆ ಬಿಡಿಗಾಸನ್ನೂ ನೀಡದಿರುವುದನ್ನು ವಿಷಾದದಿಂದ ಹೇಳಬೇಕಾಗಿದೆ. ರಾಜ್ಯ ಸರ್ಕಾರವೇ ಬರದಿಂದ ಬಾಧಿತರಾದವರಿಗೆ ಬೆಳೆ ಪರಿಹಾರವಾಗಿ 2000 ರೂ.ಗಳ ವರೆಗಿನ ತಾತ್ಕಾಲಿಕ ಪರಿಹಾರದ ಘೋಷಣೆಯನ್ನು ಮಾಡಿದ್ದು, ಈವರೆಗೆ 550 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.
ವಾರದೊಳಗೆ ಮೊದಲ ಕಂತಿನ ಪರಿಹಾರ ರೈತರಿಗೆ ತಲುಪಿಸಲಾಗುವ ವ್ಯವಸ್ಥೆಯಾಗುತ್ತಿದೆ. ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಅಸಲು ಪಾವತಿಸಿದಲ್ಲಿ ಬಡ್ಡಿ ಮನ್ನಾ ಮಾಡಲು ನಮ್ಮ ಸರ್ಕಾರ ಆದೇಶ ಹೊರಡಿಸಿದೆ. ಕೊಬ್ಬರಿ ಬೆಲೆ ಕುಸಿತಗೊಂಡು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 1500 ರೂಗಳ ನೆರವನ್ನು ರಾಜ್ಯ ಸರ್ಕಾರವೆ ನೀಡುತ್ತಿದೆ.