ರಾಯಚೂರು : ಇದೇ ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ವೇದಿಕೆಯನ್ನು ರಾಜಕೀಯಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದ್ದು, ಅದಕ್ಕೆ ವಿರೋಧವಿದೆಯೇ ಹೊರತು ಶ್ರೀರಾಮಚಂದ್ರ, ಮಂದಿರದ ಉದ್ಘಾಟನೆಗೆ ಯಾವುದೇ ವಿರೋಧವಿಲ್ಲ ಎಂದು ಮುಖ್ಯಮಂತ್ರಿಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರತಿಮೆ ಪ್ರತಿಷ್ಠೆಗೆ ನಮ್ಮದೇನೂ ವಿರೋಧವಿಲ್ಲ. ಆದರೆ ಬಿಜೆಪಿ ಅದರಲ್ಲಿ ರಾಜಕೀಯ ಮಾಡಲು ಹೊರಟಿದೆ. ಉದ್ಘಾಟನಾ ಸಭೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಇದನ್ನು ವಿರೋಧಿಸುತ್ತೇವೆಯೇ ಹೊರತು ಶ್ರೀರಾಮಚಂದ್ರನ್ನಾಗಲಿ, ಮಂದಿರವನ್ನಾಗಲಿ ವಿರೋಧಿಸಿಲ್ಲ ಎಂದೂ ಸ್ಪಷ್ಟಪಡಿಸಿದರು.ಜನೆವರಿ 22ರ ನಂತರ ಅಯೋಧ್ಯೆಗೆ ತೆರಳುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಎಲ್ಲೂ ಅಯೋಧ್ಯೆಗೆ ಹೋಗುತ್ತೇನೆ, ಹೋಗುವುದಿಲ್ಲ ಎಂದು ಹೇಳಿಲ್ಲ ಎಂದರು.
ಕೈ ವಿರುದ್ಧ BSY ಕಿಡಿ
ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಬಗ್ಗೆ ಕಾಂಗ್ರೆಸ್ ನವರಿಗೆ ಅಸಮಾಧಾನ, ಅತೃಪ್ತಿ ಇದೆ. ಯಾಕೆಂದರೆ ಬಿಜೆಪಿಯ ವರಿಗೆ ಅನುಕೂಲ ಆಗಬಹುದು ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಯೋಧ್ಯೆಯಲ್ಲಿ ಜ.22ರಂದು ರಾಮಮಂದಿರ ಪ್ರತಿಷ್ಠಾಪನೆ ಇಡೀ ವಿಶ್ವದ ಗಮನ ಸೆಳೆದಿದೆ ಎಂದರು.
ದೇಶದಾದ್ಯಂತ ಜನ ನೋಡಲು ಬರುತ್ತಿದ್ದಾರೆ ಎಂದರು. ರಾಮಮಂದಿರ ಪ್ರತಿಷ್ಠಾಪನೆಗೆ ಎಲ್ಲ ಪಕ್ಷದವರು ಬಂದು ಭಾಗವಹಿಸಬೇಕು ಎಂಬುದು ಪ್ರಧಾನಿ ಮೋದಿ ಅಪೇಕ್ಷೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಿ ಉಪವಾಸ ಇದ್ದು ಸೇವೆ ಮಾಡುತ್ತಿದ್ದಾರೆ. ಇನ್ನಾದರೂ ಕಾಂಗ್ರೆಸ್ನವರಿಗೆ ಸದ್ಭುದ್ದಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿ ಎಂದರು.