ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿಧನವು ಇಡೀ ಕರುನಾಡಿನ ಜನತೆಗೆ ತುಂಬಲಾರದಂತಹ ನಷ್ಟವಾಗಿದೆ. ಇದೀಗ ಅವರ ಪಾರ್ಥಿವ ಶರೀರವು ಬೆಂಗಳೂರಿನ ಸದಾಶಿವನಗರ್ ದಿಂದ ಅವರ ಹುಟ್ಟುರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಗೆ ತೆರಳುತ್ತಿದ್ದು, ಇಂದು ಅಲ್ಲಿಯೇ ಅವರ ಅಂತ್ಯಕ್ರಿಯೆ ನೆರವೇರಲಿದೆ. ಇನ್ನು ಎಸ್ಎಂ ಕೃಷ್ಣ ಅವರ ಅಗಲಿಕೆಗೆ ನಟಿ ರಮ್ಯಾ ಅವರು ಭಾವುಕ ಪೋಸ್ಟ್ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿಕೊಂಡಿದ್ದು,ʻʻಒಬ್ಬ Statesman ಎಲ್ಲಾ ಅರ್ಥಗಳಲ್ಲಿ ರಾಜಕಾರಣಿ ಎಂದಿಗೂ ಅಲ್ಲ. ಅವರು ಯಾರನ್ನೂ, ತಮ್ಮ ಪ್ರತಿಸ್ಪರ್ಧಿಗಳನ್ನು ಸಹ ದ್ವೇಷಿಸಿ ಮಾತನಾಡಲಿಲ್ಲ. ಭವಿಷ್ಯದ ದೃಷ್ಟಿಯುಳ್ಳವ, ದಯಾಮಯಿ ಅನುಕಂಪದಿಂದ ಕೂಡಿರುವ, ಸುಂದರವಾಗಿ ಮಾತನಾಡುವ, ವಿದ್ಯಾವಂತ, ಹಾಸ್ಯಭರಿತ ವ್ಯಕ್ತಿತ್ವದವರು ನೀವು… ನಿಮ್ಮಂತೆ ಮತ್ತೊಬ್ಬರು ಇರಲು ಆಗುವುದಿಲ್ಲ.. ಎಲ್ಲದಕ್ಕಾಗಿ ಧನ್ಯವಾದಗಳು… ಎಂದು ಬರೆದುಕೊಂಡಿದ್ದಾರೆ. ಕೊನೆಯಲ್ಲಿ ನೀವು ಈಗ ನಿಮ್ಮ ಬೆಸ್ಟ್‌ಫ್ರೆಂಡ್ ಜೊತೆಗೆ ಇದ್ದೀರಾ ಎಂದು ಬರೆದು ಹಾರ್ಟ್ ಎಮೊಜಿ ಹಾಕಿದ್ದಾರೆ.
ಎಸ್ಎಮ್ ಕೃಷ್ಣ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಟಿ ರಮ್ಯಾ ಅವರು ಬೆಂಗಳೂರಿನ ಸದಾಶಿವನಗರಕ್ಕೆ ಆಗಮಿಸಿ ಎಸ್. ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸದೆ ನಾನು ಈ ಸ್ಥಿತಿಯಲ್ಲಿ ಮಾತನಾಡಲು ಆಗಲ್ಲ ಎಂದು ತಿಳಿಸಿ ಅಲ್ಲಿಂದ ತೆರಳಿದ್ದರು. ಎಸ್.ಎಂ ಕೃಷ್ಣ ಅವರ ನೇತೃತ್ವದಲ್ಲೇ ರಾಜಕಾರಣಕ್ಕೆ ಕಾಲಿಟ್ಟ ರಮ್ಯಾ ಅವರು ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಶೀಘ್ರವಾಗಿ ಬೆಳೆದರು. ತಮ್ಮ ಸೆಲೆಬ್ರಿಟಿ ಇಮೇಜ್‌ನಿಂದಾಗಿ ಹೈಕಮಾಂಡ್‌ನಲ್ಲಿ ಶೀಘ್ರವಾಗಿ ಗುರುತಿಸಿಕೊಂಡಿದ್ದರು.








