ಬೆಂಗಳೂರು: ವಿವಿಧ ಉದ್ದೇಶಗಳಿಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಡಿನೋಟಿಫೈ ಮಾಡದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೇರಿದಂತೆ ಯೋಜನಾ ಸಂಸ್ಥೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬಿಡಿಎ ಅಭಿವೃದ್ಧಿಪಡಿಸಿದ ಲೇಔಟ್ ಗಳಲ್ಲಿ ಪರ್ಯಾಯ ನಿವೇಶನಗಳನ್ನು ಕೋರಿ ಹಂಚಿಕೆದಾರರಿಂದ ಯಾವುದೇ ವಿನಂತಿಗಳ ಬಗ್ಗೆ ಮಾಹಿತಿ ನೀಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅವರು ಆಗಸ್ಟ್ 28ರಂದು ಪತ್ರ ಬರೆದಿದ್ದು, ಬಿಡಿಎಗೆ ಮಾತ್ರವಲ್ಲ, ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್ ಡಿಎ) ಮತ್ತು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಈ ಸೂಚನೆ ನೀಡಿದ್ದಾರೆ.
ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಯಾವುದೇ ಕಾರಣಕ್ಕೂ ಡಿನೋಟಿಫೈ ಮಾಡಬಾರದು. ಇದಲ್ಲದೆ, ಪರ್ಯಾಯ ನಿವೇಶನಗಳನ್ನು ನೀಡುವ ಯಾವುದೇ ಪ್ರಸ್ತಾಪಗಳಿದ್ದರೆ, ಯಾವುದೇ ಪತ್ರವ್ಯವಹಾರವನ್ನು ಪ್ರಾರಂಭಿಸುವ ಮೊದಲು ಅದನ್ನು ಕಡ್ಡಾಯವಾಗಿ ನನ್ನ ಗಮನಕ್ಕೆ ತರಬೇಕು” ಎಂದು ಶಿವಕುಮಾರ್ ಹೇಳಿದರು, ಯಾವುದೇ ಲೋಪಗಳಿಗೆ ಕಾರಣರಾದ ಅಧಿಕಾರಿಗಳು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿನೋಟಿಫಿಕೇಷನ್ ಕಾನೂನು ಬಾಹಿರವಾಗಿದ್ದರೂ, ನಾಡಪ್ರಭು ಕೆಂಪೇಗೌಡ ಬಡಾವಣೆಯಂತಹ ಹೊಸದಾಗಿ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಮಾತ್ರ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.