ಕೊಲಂಬೋ:ಹಿಂದೂ ಮಹಾಸಾಗರ ಪ್ರದೇಶದಾದ್ಯಂತ ಚೀನಾದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಕಳವಳಗಳ ಮಧ್ಯೆ ಭಾರತ ಮತ್ತು ಶ್ರೀಲಂಕಾ ಶನಿವಾರ ರಕ್ಷಣಾ, ಇಂಧನ, ಡಿಜಿಟಲ್ ಮೂಲಸೌಕರ್ಯ, ಆರೋಗ್ಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಏಳು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದವು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರು ಅಧಿಕಾರಕ್ಕೆ ಆಯ್ಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಶ್ರೀಲಂಕಾ ಭೇಟಿಯ ಸಂದರ್ಭದಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಭಾರತದ ಭದ್ರತಾ ಹಿತಾಸಕ್ತಿಗಳಿಗೆ ವಿರುದ್ಧವಾದ ಯಾವುದೇ ರೀತಿಯಲ್ಲಿ ಶ್ರೀಲಂಕಾ ತನ್ನ ಭೂಪ್ರದೇಶವನ್ನು ಬಳಸಲು ಅನುಮತಿಸುವುದಿಲ್ಲ ಎಂದು ಪ್ರಧಾನಿ ಮೋದಿಗೆ ಭರವಸೆ ನೀಡಿದ್ದೇನೆ ಎಂದು ದಿಸ್ಸಾನಾಯಕೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಭಾರತದ ಭದ್ರತೆಗೆ ಮತ್ತು ಪ್ರಾದೇಶಿಕ ಸ್ಥಿರತೆಗೆ ವಿರುದ್ಧವಾದ ಯಾವುದೇ ರೀತಿಯಲ್ಲಿ ತನ್ನ ಭೂಪ್ರದೇಶವನ್ನು ಬಳಸಲು ಅನುಮತಿಸುವುದಿಲ್ಲ ಎಂಬ ಶ್ರೀಲಂಕಾದ ನಿಲುವನ್ನು ನಾನು ಪುನರುಚ್ಚರಿಸಿದ್ದೇನೆ” ಎಂದು ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು