ನವದೆಹಲಿ: ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದರೂ, ಭಾರತದ ತೈಲ ಕಂಪನಿಗಳು ಇಂದು (ಮೇ 1, 2026) ಸಾಮಾನ್ಯ ಗ್ರಾಹಕರಿಗೆ ನಿರಾಳ ಸುದ್ದಿ ನೀಡಿವೆ. ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಮನೆ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಪ್ರತಿ ತಿಂಗಳ ಮೊದಲ ದಿನದಂತೆ ಇಂದು ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ದರ ಪರಿಷ್ಕರಣೆ ನಡೆದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದ್ದರೂ, ದೇಶಿಯ ವಿಮಾನಯಾನ ಸಂಸ್ಥೆಗಳಿಗೆ ಹೊರೆಯಾಗದಂತೆ ದೇಶಿಯ ಎಟಿಎಫ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಪೂರೈಸುವ ಇಂಧನ ದರವನ್ನು ಹೆಚ್ಚಿಸಲಾಗಿದೆ.
ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ಸರಿಸುಮಾರು ₹103 ರ ಆಸುಪಾಸಿನಲ್ಲೇ ಮುಂದುವರಿದಿದೆ.
ಗೃಹಿಣಿಯರಿಗೆ ನೆಮ್ಮದಿಯ ಸುದ್ದಿ ಎಂದರೆ, ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಏರಿಕೆ ಮಾಡಲಾಗಿಲ್ಲ.
ಆದರೆ, ಹೋಟೆಲ್ ಮತ್ತು ಕೈಗಾರಿಕೆಗಳಲ್ಲಿ ಬಳಸುವ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ₹993 ರಷ್ಟು ಭಾರೀ ಏರಿಕೆ ಮಾಡಲಾಗಿದೆ. ಇದು ಹೋಟೆಲ್ ಊಟದ ದರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.








