ನವದೆಹಲಿ: ಇತ್ತೀಚೆಗಷ್ಟೇ ಲೆನ್ಸ್‌ಕಾರ್ಟ್ (Lenskart) ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಬಿಂದಿ ಧರಿಸದಂತೆ ಸೂಚನೆ ನೀಡಿ ವಿವಾದಕ್ಕೀಡಾದ ಬೆನ್ನಲ್ಲೇ, ಈಗ ‘ಏರ್ ಇಂಡಿಯಾ’ (Air India) ವಿಮಾನಯಾನ ಸಂಸ್ಥೆಯ ಕ್ಯಾಬಿನ್ ಕ್ರೂ ಸಿಬ್ಬಂದಿಗಳ ‘ಗ್ರೂಮಿಂಗ್’ ನೀತಿಯು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿಬ್ಬಂದಿಗಳು ಕರ್ತವ್ಯದ ಅವಧಿಯಲ್ಲಿ ಬಿಂದಿ ಮತ್ತು ಸಿಂಧೂರದಂತಹ ಧಾರ್ಮಿಕ ಚಿಹ್ನೆಗಳನ್ನು ಧರಿಸುವುದರ ಮೇಲೆ ಹೇರಲಾಗಿರುವ ನಿರ್ಬಂಧಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿವೆ.
ವೈರಲ್ ಆದ ನಿಯಮಾವಳಿ: ಏರ್ ಇಂಡಿಯಾ ತನ್ನ ಕ್ಯಾಬಿನ್ ಕ್ರೂ ಸಿಬ್ಬಂದಿಗಳಿಗಾಗಿ ಹೊರಡಿಸಿರುವ ಹೊಸ ಮಾರ್ಗಸೂಚಿಗಳಲ್ಲಿ, ಮಹಿಳಾ ಸಿಬ್ಬಂದಿಗಳು ದೊಡ್ಡದಾದ ಬಿಂದಿ ಅಥವಾ ಗಾಢವಾದ ಸಿಂಧೂರವನ್ನು ಧರಿಸುವಂತಿಲ್ಲ ಎಂದು ಸೂಚಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಪುರುಷ ಸಿಬ್ಬಂದಿಗಳು ಕೈಗೆ ಕಟ್ಟುವ ದಾರ (ಧರ್ಮದ ದಾರ) ಅಥವಾ ಧಾರ್ಮಿಕ ಉಂಗುರಗಳನ್ನು ಧರಿಸುವಂತಿಲ್ಲ ಎಂಬ ನಿಯಮವೂ ಸೇರಿದೆ ಎನ್ನಲಾಗಿದೆ.
ಸಾರ್ವಜನಿಕರ ಆಕ್ರೋಶ: “ಭಾರತದ ಪರಂಪರೆಯನ್ನು ಪ್ರತಿನಿಧಿಸುವ ವಿಮಾನಯಾನ ಸಂಸ್ಥೆಯಲ್ಲೇ ಬಿಂದಿ ಮತ್ತು ಸಿಂಧೂರಕ್ಕೆ ನಿಷೇಧವೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ‘ನೋ ಬಿಂದಿ, ನೋ ಬಿಸಿನೆಸ್’ (No Bindi, No Business) ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಅನೇಕರು ಏರ್ ಇಂಡಿಯಾವನ್ನು ಟೀಕಿಸುತ್ತಿದ್ದಾರೆ.
ಟಾಟಾ ಸಮೂಹಕ್ಕೆ ಪ್ರಶ್ನೆ: ಟಾಟಾ ಸಂಸ್ಥೆಯು ಸಾಂಪ್ರದಾಯಿಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ, ಅಂತಹ ಸಂಸ್ಥೆಯ ಒಡೆತನದ ಏರ್ ಇಂಡಿಯಾದಲ್ಲಿ ಇಂತಹ ‘ಪಾಶ್ಚಾತ್ಯೀಕರಣ’ದ ನಿಯಮಗಳು ಏಕೆ? ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.








