ಪಾಟ್ನಾ:ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಯು (JD-U) ಮುಖ್ಯಸ್ಥ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ನಾಳೆ (ಮೇ 7) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಬಿಹಾರದ ಸಮ್ರಾಟ್ ಚೌಧರಿ ನೇತೃತ್ವದ ಎನ್‌ಡಿಎ (NDA) ಸರ್ಕಾರದ ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ನಿಶಾಂತ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡಲು ಜೆಡಿಯು ನಾಯಕರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಟ್ನಾದ ಗಾಂಧಿ ಮೈದಾನದಲ್ಲಿ ನಾಳೆ ಅದ್ಧೂರಿ ಸಮಾರಂಭ ನಡೆಯಲಿದ್ದು, ನಿಶಾಂತ್ ಕುಮಾರ್ ಸೇರಿದಂತೆ ಹಲವು ಹೊಸ ಮುಖಗಳು ಸಂಪುಟ ಸೇರುವ ನಿರೀಕ್ಷೆಯಿದೆ. ಜೆಡಿಯು ಈ ಬಾರಿ 16 ಸಚಿವ ಸ್ಥಾನಗಳಿಗೆ ಬೇಡಿಕೆಯಿಟ್ಟಿದೆ.
ಇತ್ತೀಚೆಗಷ್ಟೇ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಿದ್ದ ಎಂಜಿನಿಯರಿಂಗ್ ಪದವೀಧರ ನಿಶಾಂತ್ ಕುಮಾರ್, ಕಳೆದ ಕೆಲವು ದಿನಗಳಿಂದ ಬಿಹಾರದಾದ್ಯಂತ ‘ಸದ್ಭಾವ ಯಾತ್ರೆ’ ನಡೆಸುತ್ತಿದ್ದಾರೆ. ತಂದೆಯ ಉತ್ತರಾಧಿಕಾರಿಯಾಗಿ ಅವರನ್ನು ಬಿಂಬಿಸಲಾಗುತ್ತಿದೆ.
ನಿಶಾಂತ್ ಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರವನ್ನು ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಮತ್ತು ಜಿತನ್ ರಾಮ್ ಮಾಂಝಿ ಸ್ವಾಗತಿಸಿದ್ದಾರೆ. “ನಿತೀಶ್ ಕುಮಾರ್ ಅವರ ಪರಂಪರೆಯನ್ನು ಮುಂದುವರಿಸಲು ಇದು ಉತ್ತಮ ನಡೆ” ಎಂದು ಅವರು ಬಣ್ಣಿಸಿದ್ದಾರೆ.
ಸದಾ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಮಾತನಾಡುತ್ತಿದ್ದ ನಿತೀಶ್ ಕುಮಾರ್ ಈಗ ತಮ್ಮ ಮಗನನ್ನೇ ಸಚಿವನನ್ನಾಗಿ ಮಾಡುತ್ತಿರುವುದು ಆರ್‌ಜೆಡಿ ಸೇರಿದಂತೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದೆ.
ನಿತೀಶ್ ಕುಮಾರ್ ಅವರ ಏಕೈಕ ಪುತ್ರನಾದ ನಿಶಾಂತ್ ಕುಮಾರ್, ಇದುವರೆಗೆ ರಾಜಕಾರಣದಿಂದ ದೂರವೇ ಉಳಿದಿದ್ದರು. ಆದರೆ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳಿದ ನಂತರ, ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿಯಲು ನಿಶಾಂತ್ ಕುಮಾರ್ ಅವರನ್ನು ಸಜ್ಜುಗೊಳಿಸಲಾಗುತ್ತಿದೆ ಎನ್ನಲಾಗುತ್ತಿದೆ.








