ಪಾಟ್ನಾ: ಬಿಹಾರದ ಸುದೀರ್ಘ ಕಾಲದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇದೇ ಏಪ್ರಿಲ್ 10ರಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಅವರು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಅಧಿಕೃತವಾಗಿ ಹೆಜ್ಜೆ ಇಡಲಿದ್ದು, ಬಿಹಾರದಲ್ಲಿ ದಶಕಗಳ ಕಾಲದ ‘ನಿತೀಶ್ ಯುಗ’ ಅಂತ್ಯಗೊಳ್ಳುವ ಮುನ್ಸೂಚನೆ ಸಿಕ್ಕಿದೆ.
ಬಿಹಾರ ಬಿಜೆಪಿ ಅಧ್ಯಕ್ಷ ಸಂಜಯ್ ಸರೋವ್ಗಿ ಅವರು ಭಾನುವಾರ ಈ ಮಾಹಿತಿಯನ್ನು ಖಚಿತಪಡಿಸಿದ್ದು, ಏಪ್ರಿಲ್ 10ರಂದು ದೆಹಲಿಯಲ್ಲಿ ನಿತೀಶ್ ಕುಮಾರ್ ಸಂಸತ್ತಿನ ಮೇಲ್ಮನೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಸದ್ಯ ಅವರು ಬಿಹಾರ ವಿಧಾನ ಪರಿಷತ್ (MLC) ಸದಸ್ಯತ್ವಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ.
“ನಿತೀಶ್ ಕುಮಾರ್ ಅವರ ಪ್ರಮಾಣ ವಚನ ಸ್ವೀಕಾರದ ನಂತರ, ಬಿಜೆಪಿಯ ಕೇಂದ್ರ ನಾಯಕತ್ವ ಮತ್ತು ಎನ್‌ಡಿಎ ಮೈತ್ರಿಕೂಟದ ನಾಯಕರು ಸಮಾಲೋಚನೆ ನಡೆಸಿ ಬಿಹಾರದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ,” ಎಂದು ಸರೋವ್ಗಿ ವಿವರಿಸಿದ್ದಾರೆ.








