ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಈಗ ಅಧಿಕೃತವಾಗಿ ರದ್ದುಪಡಿಸಲಾಗಿದೆ.
ಈ ಶುಭ ಸುದ್ದಿಯನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಕಚೇರಿ ಹಂಚಿಕೊಂಡಿದೆ. “ಈ ಹಿಂದೆ ಅಮಾನತುಗೊಂಡಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಈಗ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ” ಎಂದು ಗ್ರ್ಯಾಂಡ್ ಮುಫ್ತಿ ಕಚೇರಿಯ ಹೇಳಿಕೆ ತಿಳಿಸಿದೆ.
ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲೈಯರ್ ಮಧ್ಯಪ್ರವೇಶಿಸಿ ಮರುಪರಿಶೀಲಿಸುವಂತೆ ಯೆಮೆನ್ ಅಧಿಕಾರಿಗಳನ್ನು ವಿನಂತಿಸಿದ ನಂತರ, ಜುಲೈ 16 ರಂದು ನಡೆಯಬೇಕಿದ್ದ ಆಕೆಯ ಮರಣದಂಡನೆಯನ್ನು ಒಂದು ದಿನ ಮೊದಲು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು.
ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ನಿಮಿಷಾ ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದರು. ಬಲವಾದ ರಾಜತಾಂತ್ರಿಕ ಕ್ರಮಗಳ ಕೋರಿಕೆಯನ್ನು ಆಲಿಸುತ್ತಿರುವ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆಗಸ್ಟ್ 14 ಕ್ಕೆ ನಿಗದಿಪಡಿಸಿದೆ.