ಬೆಂಗಳೂರು: ಮುಂದಿನ ವರ್ಷ ಮಾರ್ಚ್ ಹೊತ್ತಿಗೆ ಬೆಂಗಳೂರು- ಹುಬ್ಬಳ್ಳಿ ನಡುವೆ ವಂದೇ ಭಾರತ್ ಹೈ ಸ್ಪೀಡ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಭಾರತೀಯ ರೈಲ್ವೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಬದ್ಧರಾಗಿದ್ದಾರೆ. ಅವರ ಆ ಪ್ರಯತ್ನದ ಭಾಗವಾಗಿ ಈ ಸೇವೆಯು ರಾಜ್ಯದ ಜನತೆಗೆ ಲಭ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Karnataka to get its first Vande Bharat high-speed train, from Bengaluru to Hubballi by March 2023
PM Shri @narendramodi ji’s govt has spearheaded the development of Indian railways like never before
These are symbolic indications of how Indian infrastructure is transforming pic.twitter.com/x6Bd9F4ff4
— Vijayendra Yeddyurappa (@BYVijayendra) September 28, 2022
ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಗೂ ಬೆಂಗಳೂರಿಗೂ ತ್ವರಿತ ಪ್ರಯಾಣ ಸೇವೆಯನ್ನು ಒದಗಿಸುವುದು ರಾಜ್ಯದ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ವವಾದದ್ದು ಎಂಬುದನ್ನು ರಾಜ್ಯ ಸರ್ಕಾರ ಮನಗಂಡಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ (Indian Institute of Science) ತಜ್ಞರು ಎರಡೂ ನಗರಗಳ ನಡುವೆ ಹೈ ಸ್ಪೀಡ್ ರೈಲು ಕಾರಿಡಾರ್ ಅನ್ನು ನಿರ್ಮಾಣ ಮಾಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿದ್ದರು.
ಈ ಎರಡೂ ನಗರಗಳ ನಡುವೆ ಈಗಿರುವ 400 ಕಿ.ಮೀ. ದೂರದ ರೈಲು ಮಾರ್ಗದಲ್ಲೇ ಹೈ ಸ್ಪೀಡ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸಬಹುದು. ಬೆಂಗಳೂರಿನಲ್ಲಿರುವ ಐಐಎಸ್ಸಿ ಮುಖ್ಯ ಕ್ಯಾಂಪಸ್ ಬಳಿಯಿರುವ ಯಶವಂತಪುರ ರೈಲು ನಿಲ್ದಾಣದಿಂದ, ಹುಬ್ಬಳ್ಳಿವರೆಗೆ ಈ ರೈಲು ಸಂಚಾರ ನಡೆಸಬೇಕು. ಮಾರ್ಗ ಮಧ್ಯೆ, ಮೂರು ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಗೆ ಅವಕಾಶ ಕೊಡಬೇಕು.
ತುಮಕೂರಿನಲ್ಲಿ ಒಂದು ನಿಲುಗಡೆ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ಐಐಎಸ್ಸಿಯ ನೂತನ ಕ್ಯಾಂಪಸ್ಸಿನ ಬಳಿಯಿರುವ ರೈಲು ನಿಲ್ದಾಣದಲ್ಲಿ ಮತ್ತೊಂದು ನಿಲುಗಡೆ ಆನಂತರ ದಾವಣಗೆರೆಯ ಪ್ರಧಾನ ರೈಲು ನಿಲ್ದಾಣದಲ್ಲಿ ಮತ್ತೊಂದು ನಿಲುಗಡೆ ನೀಡಬೇಕು. ಅದರಿಂದ ಆ ಭಾಗದ ಜನರಿಗೆ ತ್ವರಿತವಾಗಿ ಪ್ರಯಾಣಿಸಲು ಹಾಗೂ ವಾಣಿಜ್ಯ ಸರಕುಗಳು ಸರಾಗವಾಗಿ, ತ್ವರಿತವಾಗಿ ಎರಡೂ ನಗರಗಳ ನಡುವೆ ಸಂಚಾರ ಮಾಡಲು ಅನುಕೂಲವಾಗುತ್ತದೆ ಎಂದು ತಜ್ಞರು ಆ ಪ್ರಸ್ತಾವನೆಯಲ್ಲಿ ಹೇಳಿದ್ದರು.
ಮುಂದಿನ ವರ್ಷ ಆರಂಭಗೊಳ್ಳಲಿರುವ, ಬೆಂಗಳೂರು- ಹುಬ್ಬಳ್ಳಿ ನಡುವಿನ ವಂದೇ ಭಾರತ್ ಹೈ ಸ್ಪೀಡ್ ರೈಲು ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಸಾಮಾನ್ಯ ಪ್ಯಾಸೆಂಜರ್ ರೈಲಿನಲ್ಲಿ ಈ ಎರಡೂ ನಗರಗಳ ನಡುವಿನ ಸಂಚಾರಕ್ಕೆ 7 ಗಂಟೆ ಬೇಕು. ಆದರೆ, ಹೈ ಸ್ಪೀಡ್ ರೈಲಿನಲ್ಲಿ ನಾಲ್ಕು ಗಂಟೆಗಳಲ್ಲಿ ಈ ಎರಡೂ ನಗರಗಳ ನಡುವೆ ರೈಲು ಸಂಚಾರ ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.