ನವದೆಹಲಿ:ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳಿಗಾಗಿ ಹಾಹಾಕಾರ ಮತ್ತು ‘ಪ್ಯಾನಿಕ್ ಬುಕ್ಕಿಂಗ್’ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಬುಕ್ಕಿಂಗ್ ವ್ಯವಸ್ಥೆಯಲ್ಲಿ ಹೊಸ ನಿರ್ಬಂಧಗಳನ್ನು ಹೇರಿದೆ. ಅಡುಗೆ ಅನಿಲದ ದುರುಪಯೋಗ ತಡೆಯಲು ಮತ್ತು ಎಲ್ಲರಿಗೂ ಸಿಲಿಂಡರ್ ಲಭ್ಯವಾಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಹೊಸ ನಿಯಮದ ಪ್ರಕಾರ, ಗ್ರಾಹಕರು ಒಂದು ಸಿಲಿಂಡರ್ ಪಡೆದ ತಕ್ಷಣ ಮತ್ತೊಂದನ್ನು ಬುಕ್ ಮಾಡಲು ಸಾಧ್ಯವಿಲ್ಲ. ನಿರ್ದಿಷ್ಟ ಅವಧಿಯ ನಂತರವಷ್ಟೇ ಮುಂದಿನ ಬುಕ್ಕಿಂಗ್‌ಗೆ ಅವಕಾಶ ನೀಡಲಾಗುತ್ತದೆ.
ಹೊಸ ನಿಯಮದ ಪ್ರಮುಖ ಅಂಶಗಳು:
ನಗರ ಪ್ರದೇಶಗಳಿಗೆ (Urban Cities): ನಗರವಾಸಿಗಳು ಒಂದು ಸಿಲಿಂಡರ್ ವಿತರಣೆಯಾದ 25 ದಿನಗಳ ನಂತರವಷ್ಟೇ ಮುಂದಿನ ರೀಫಿಲ್ ಬುಕ್ ಮಾಡಲು ಅರ್ಹರಿರುತ್ತಾರೆ.
ಗ್ರಾಮೀಣ ಭಾಗಗಳಿಗೆ (Rural Areas): ಹಳ್ಳಿಗಳಲ್ಲಿ ವಾಸಿಸುವ ಗ್ರಾಹಕರಿಗೆ ಈ ಅವಧಿಯನ್ನು 45 ದಿನಗಳಿಗೆ ನಿಗದಿಪಡಿಸಲಾಗಿದೆ. ಅಂದರೆ ಒಂದು ಸಿಲಿಂಡರ್ ಪಡೆದ ಒಂದೂವರೆ ತಿಂಗಳ ನಂತರವಷ್ಟೇ ಮತ್ತೊಂದು ಬುಕ್ಕಿಂಗ್ ಸಾಧ್ಯ.
ಏಕೆ ಈ ನಿರ್ಧಾರ?: ಯುದ್ಧದ ಭೀತಿಯಿಂದಾಗಿ ಜನರು ಮುನ್ನೆಚ್ಚರಿಕೆಯಾಗಿ ಮುಂದಿನ 3-4 ತಿಂಗಳ ಕೋಟಾವನ್ನು ಈಗಲೇ ಸಂಗ್ರಹಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಕೃತಕ ಅಭಾವ ಸೃಷ್ಟಿಯಾಗುತ್ತಿರುವುದನ್ನು ತಡೆಯಲು ಸರ್ಕಾರ ಈ ‘ರೇಷನಿಂಗ್’ ಪದ್ಧತಿ ಜಾರಿಗೆ ತಂದಿದೆ.
ವಾಣಿಜ್ಯ ಬಳಕೆಗೆ ಕಡಿತ: ಹೋಟೆಲ್ ಮತ್ತು ಕೈಗಾರಿಕೆಗಳಲ್ಲಿ ಬಳಸುವ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಶೇ. 50 ರಷ್ಟು ಕಡಿತಗೊಳಿಸಲಾಗಿದ್ದು, ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಮೊದಲ ಆದ್ಯತೆ ನೀಡಲಾಗಿದೆ.
ಸರ್ಕಾರದ ಭರವಸೆ:
”ದೇಶದಲ್ಲಿ ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ. ಆದರೆ ಅನಗತ್ಯವಾಗಿ ಜನರು ಬುಕ್ಕಿಂಗ್ ಮಾಡುತ್ತಿರುವುದರಿಂದ ವಿತರಣಾ ಜಾಲದ ಮೇಲೆ ಒತ್ತಡ ಬೀಳುತ್ತಿದೆ. ಈ ಹೊಸ ನಿಯಮದಿಂದಾಗಿ ನಿಜವಾದ ಅಗತ್ಯವಿರುವವರಿಗೆ ಸಕಾಲದಲ್ಲಿ ಗ್ಯಾಸ್ ತಲುಪಲಿದೆ,” ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.








