ನವದೆಹಲಿ:ಶತಮಾನಗಳಿಂದ ವಿಜ್ಞಾನಿಗಳು ಮತ್ತು ಧರ್ಮಗುರುಗಳಿಗೆ ಸವಾಲಾಗಿದ್ದ ‘ಶ್ರೌಡ್ ಆಫ್ ಟುರಿನ್’ (ಯೇಸು ಕ್ರಿಸ್ತರ ದೇಹವನ್ನು ಸುತ್ತಲು ಬಳಸಲಾದ ಬಟ್ಟೆ ಎನ್ನಲಾದ ಅವಶೇಷ) ಕುರಿತು ಈಗ ಹೊಸದೊಂದು ಸಂಚಲನಕಾರಿ ವಿಷಯ ಬೆಳಕಿಗೆ ಬಂದಿದೆ. ಇತ್ತೀಚಿನ ಅತ್ಯಾಧುನಿಕ ಡಿಎನ್ಎ (DNA) ವಿಶ್ಲೇಷಣೆಯ ಪ್ರಕಾರ, ಈ ಪವಿತ್ರ ಬಟ್ಟೆಯ ಮೂಲ ಭಾರತ ಆಗಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ವಿಜ್ಞಾನಿಗಳು ಈ ಬಟ್ಟೆಯ ಮೇಲಿರುವ ಧೂಳಿನ ಕಣಗಳು ಮತ್ತು ಪರಾಗ ರೇಣುಗಳನ್ನು (Pollen) ಪರೀಕ್ಷಿಸಿದಾಗ, ಅದರಲ್ಲಿ ಪ್ರಪಂಚದ ವಿವಿಧ ಭಾಗಗಳ ಸಸ್ಯಗಳ ಡಿಎನ್ಎ ಪತ್ತೆಯಾಗಿದೆ. ಇದರಲ್ಲಿ ಗಮನಾರ್ಹವಾಗಿ ಭಾರತಕ್ಕೆ ಸೇರಿದ ಸಸ್ಯಗಳ ಕುರುಹುಗಳು ಪತ್ತೆಯಾಗಿವೆ.
ಸಂಶೋಧನೆಯ ಪ್ರಕಾರ, ಈ ಬಟ್ಟೆಯನ್ನು ತಯಾರಿಸಲು ಬಳಸಲಾದ ನೂಲು ಅಥವಾ ಬಟ್ಟೆಯ ನೇಯ್ಗೆಯು ಭಾರತದಲ್ಲಿ ನಡೆದಿರಬಹುದು ಅಥವಾ ಈ ಬಟ್ಟೆಯು ಭಾರತದ ಮೂಲಕ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸಿರಬಹುದು ಎಂದು ಹೇಳಲಾಗುತ್ತಿದೆ.ಬಟ್ಟೆಯ ಮೇಲೆ ಕೇವಲ ಭಾರತದ ಮಾತ್ರವಲ್ಲದೆ ಚೀನಾ, ಮಧ್ಯಪ್ರಾಚ್ಯ ಮತ್ತು ಯುರೋಪ್ಗೆ ಸೇರಿದ ಸಸ್ಯಗಳ ಡಿಎನ್ಎ ಕೂಡ ಪತ್ತೆಯಾಗಿದೆ. ಇದು ಈ ಪವಿತ್ರ ಬಟ್ಟೆಯು ಜಗತ್ತಿನಾದ್ಯಂತ ಸಂಚರಿಸಿದ್ದನ್ನು ಪುಷ್ಟೀಕರಿಸುತ್ತದೆ.
ಇಟಲಿಯ ಪಡುವಾ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಜೀನ್ ಸೀಕ್ವೆನ್ಸಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಈ ಸತ್ಯಾಂಶಗಳನ್ನು ಹೊರಹಾಕಿದ್ದಾರೆ.
ಇಟಲಿಯ ಟುರಿನ್ ನಗರದ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಕೆಥೆಡ್ರಲ್ನಲ್ಲಿ ಈ ಬಟ್ಟೆಯನ್ನು ಇರಿಸಲಾಗಿದೆ. ಇದು ಸುಮಾರು 14 ಅಡಿ ಉದ್ದದ ಲಿನಿನ್ ಬಟ್ಟೆಯಾಗಿದ್ದು, ಇದರ ಮೇಲೆ ಶಿಲುಬೆಗೇರಿಸಲ್ಪಟ್ಟ ವ್ಯಕ್ತಿಯೊಬ್ಬನ ಅಸ್ಪಷ್ಟ ಚಿತ್ರಣವಿದೆ. ಇದು ಯೇಸು ಕ್ರಿಸ್ತರ ಅಂತ್ಯಸಂಸ್ಕಾರದ ವೇಳೆ ಬಳಸಲಾದ ಬಟ್ಟೆ ಎಂದು ಕೋಟ್ಯಂತರ ಭಕ್ತರು ನಂಬುತ್ತಾರೆ.








