ವಾಷಿಂಗ್ಟನ್: ಜಗತ್ತು ಕರೋನಾ ಮುಕ್ತವಾಯಿತೇನೋ ಎನ್ನುತ್ತಿರುವಾಗಲೇ ಅಮೆರಿಕದಲ್ಲಿ ಹೊಸ ರೂಪಾಂತರಿ ತಳಿಯೊಂದು ಆತಂಕ ಮೂಡಿಸಿದೆ. BA.3.2 ಎಂಬ ತಾಂತ್ರಿಕ ಹೆಸರಿನ ಈ ತಳಿಗೆ ವಿಜ್ಞಾನಿಗಳು ‘ಸಿಕಾಡಾ’ (Cicada) ಎಂದು ಹೆಸರಿಸಿದ್ದಾರೆ. ಇದು ಈ ಹಿಂದಿನ ತಳಿಗಳಿಗಿಂತ ಸುಮಾರು 70 ಕ್ಕೂ ಹೆಚ್ಚು ರೂಪಾಂತರಗಳನ್ನು (Mutations) ಹೊಂದಿದ್ದು, ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ವರದಿಗಳು ತಿಳಿಸಿವೆ.
ಸಿಕಾಡಾ ಎಂಬುದು ಒಂದು ಜಾತಿಯ ಕೀಟ. ಇದು ವರ್ಷಗಟ್ಟಲೆ ಮಣ್ಣಿನ ಅಡಿಯಲ್ಲಿ ಅಡಗಿ ಕುಳಿತು ದಿಢೀರನೆ ಹೊರಬರುತ್ತದೆ. ಅದೇ ರೀತಿ ಈ ವೈರಸ್ ಕೂಡ ಬಹಳ ದಿನಗಳ ಕಾಲ ಅಜ್ಞಾತವಾಗಿದ್ದು, ಈಗ ದಿಢೀರನೆ ಪತ್ತೆಯಾಗಿರುವುದರಿಂದ ಈ ಹೆಸರು ನೀಡಲಾಗಿದೆ.
ಈ ಹೊಸ ತಳಿಯ ಲಕ್ಷಣಗಳು ಓಮಿಕ್ರಾನ್ ಅನ್ನು ಹೋಲುತ್ತವೆಯಾದರೂ, ಈ ಕೆಳಗಿನ ಲಕ್ಷಣಗಳು ಪ್ರಮುಖವಾಗಿ ಕಂಡುಬರುತ್ತಿವೆ:
ತೀವ್ರ ಗಂಟಲು ನೋವು: ಸೋಂಕಿತರಲ್ಲಿ ಗಂಟಲು ನೋವು ಅತಿ ಹೆಚ್ಚಾಗಿ ಕಂಡುಬರುತ್ತಿದೆ.
ಶೀತ ಮತ್ತು ಮೂಗು ಕಟ್ಟುವುದು: ನೆಗಡಿ ಮತ್ತು ಸೀನುವಿಕೆ ಸಾಮಾನ್ಯವಾಗಿದೆ.
ಒಣ ಕೆಮ್ಮು ಮತ್ತು ಸುಸ್ತು: ವಿಪರೀತ ಸುಸ್ತು ಹಾಗೂ ಕೆಮ್ಮು ಕಾಣಿಸಿಕೊಳ್ಳಬಹುದು.
ಮೈ-ಕೈ ನೋವು ಮತ್ತು ತಲೆನೋವು: ಸ್ನಾಯುಗಳ ಸೆಳೆತ ಮತ್ತು ಸೌಮ್ಯ ಜ್ವರ ಇರಲಿದೆ.








