ಕಠ್ಮಂಡು: ನೇಪಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ರಾಷ್ಟ್ರದ ಯುವ ನಾಯಕ ಮತ್ತು ಜನಪ್ರಿಯ ರಾಪರ್ ಆಗಿದ್ದ ಬಾಲೆಂದ್ರ ಶಾ (ಬಾಲೆನ್ ಶಾ) ಅವರು ಇಂದು ನೇಪಾಳದ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನೇಪಾಳದ ಸಂಪ್ರದಾಯದಂತೆ, ಅತ್ಯಂತ ಶುಭ ದಿನವಾದ ರಾಮ ನವಮಿಯಂದು ಮಧ್ಯಾಹ್ನ 12:34ಕ್ಕೆ ಬಾಲೆನ್ ಶಾ ಅವರು ಅಧಿಕಾರ ಸ್ವೀಕರಿಸಿದರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದ್ದು, ‘1-2-3-4’ ಎಂಬ ಸಂಖ್ಯಾಶಾಸ್ತ್ರದ ಅಪರೂಪದ ಸಂಯೋಜನೆಯಲ್ಲಿ ಈ ಪದಗ್ರಹಣ ನಡೆದಿದೆ.
ಕೇವಲ 35 ವರ್ಷದ ಬಾಲೆನ್ ಶಾ, ನೇಪಾಳದ ಇತಿಹಾಸದಲ್ಲೇ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐತಿಹಾಸಿಕ ಜಯ: ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ನೇತೃತ್ವದ ‘ರಾಷ್ಟ್ರೀಯ ಸ್ವತಂತ್ರ ಪಕ್ಷ’ (RSP) ಸಾಂಪ್ರದಾಯಿಕ ಪಕ್ಷಗಳನ್ನು ಮಣಿಸಿ ಭರ್ಜರಿ ಬಹುಮತ ಸಾಧಿಸಿತ್ತು.
ಮಧೇಸಿ ಮೂಲದ ವ್ಯಕ್ತಿಯೊಬ್ಬರು ನೇಪಾಳದ ಅತ್ಯುನ್ನತ ಕಾರ್ಯಕಾರಿ ಹುದ್ದೆಯನ್ನು ಅಲಂಕರಿಸುತ್ತಿರುವುದು ಇದೇ ಮೊದಲು.
ಸರಳ ಸಮಾರಂಭ: ಅಧ್ಯಕ್ಷರ ಕಚೇರಿಯಾದ ‘ಶೀತಲ್ ನಿವಾಸ್’ನಲ್ಲಿ ನಡೆದ ಸಮಾರಂಭದಲ್ಲಿ ಶಂಖನಾದ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಮಾಣ ವಚನ ಬೋಧಿಸಲಾಯಿತು.








