ಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ ಮಾಡಿಸಿಕೊಟ್ಟಿರುವುದಕ್ಕಾಗಿ ನೇಹಾ ಹಿರೇಮಠ ಅವರ ತಂದೆ -ತಾಯಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬೆಳಗಾವಿಯ ಮನೆಗೆ ಬಂದು ಕೃತಜ್ಞತೆ ಸಲ್ಲಿಸಿದರು.
ಗುರುವಾರ ಸಂಜೆ ಆಗಮಿಸಿದ ನಿರಂಜನ ಹಿರೇಮಠ ದಂಪತಿ, ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಮನಃಪೂರ್ವಕ ಧನ್ಯವಾದ ಸಲ್ಲಿಸಿದರು. ಜೊತೆಗೆ ಬೆಳಗಾವಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಮೃಣಾಲ ಹೆಬ್ಬಾಳಕರ್ ಅವರಿಗೆ ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ನಿರಂಜನ ಹಿರೇಮಠ, ನಮ್ಮ ಕಷ್ಟಕಾಲದಲ್ಲಿ ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಲಕ್ಷ್ಮೀ ಹೆಬ್ಬಾಳಕರ್ ಅವರು ಸುರಿಯುತ್ತಿದ್ದ ಮಳೆಯ ಮಧ್ಯೆಯೂ ನಮ್ಮ ಮನೆಗೆ ಬಂದು ನಮ್ಮ ದುಃಖದಲ್ಲಿ ಭಾಗಿಯಾದರು. ಜೊತೆಗೆ ನಮಗೆ ಭದ್ರತೆ ಒದಗಿಸುವ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಮತ್ತು ಪ್ರಕರಣದ ತನಿಖೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ ಮಾಡುವ ಕೆಲಸ ಮಾಡಿದರು. ಹಾಗಾಗಿ ಅವರಿಗೆ ಕೃತತ್ಜ್ಞತೆ ಸಲ್ಲಿಸಬೇಕೆಂದು ನಾವು ಇಲ್ಲಿಯವರೆಗೂ ಬಂದಿದ್ದೇವೆ ಎಂದು ತಿಳಿಸಿದರು.
ನಮ್ಮ ಕಷ್ಟ ಕಾಲದಲ್ಲಿ ಪಕ್ಷಭೇದ ಮರೆತು, ಜಾತಿ ಭೇದ ಮರೆತು ಎಲ್ಲರೂ ನಮ್ಮ ನೆರವಿಗೆ ನಿಂತಿದ್ದಾರೆ. ಈ ಘಟನೆಯನ್ನು ರಾಜಕೀಯಕ್ಕೆ ಬಳಸಬಾರದೆಂದು ನಾನು ಮನವಿ ಮಾಡಿದ್ದೆ. ಆ ರೀತಿ ಕೆಲವರು ಬಳಸುತ್ತಿರುವುದಕ್ಕೆ ಬೇಸರವಾಗಿದೆ. ಆದರೆ ಲಕ್ಷ್ಮೀ ಹೆಬ್ಬಾಳಕರ್ ಅವರು ಯಾವ ಸ್ವಾರ್ಥವಿಲ್ಲದೆ ತಮ್ಮದೇ ಮಗಳು ಎನ್ನುವಂತೆ ಬಂದು ನಮ್ಮೊಂದಿಗೆ ನಿಂತಿದ್ದಾರೆ. ಅವರ ನೆರವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಿರಂಜನ ಹಿರೇಮಠ ಹೇಳಿದರು.
ಫೋಟೋ ದುರ್ಬಳಕೆ ಸಲ್ಲದು
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು 3 ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ಫಯಾಜ್ ಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಹಾಜರಿದ್ದ ಫೋಟೋವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಿರಂಜನ ಹಿರೇಮಠ, ನಾವು ರಾಜಕಾರಣಿಗಳು ಎಲ್ಲೆ ಕಾರ್ಯಕ್ರಮಕ್ಕೆ ಕರೆದರೆ ಹೋಗುತ್ತೇವೆ. ಅಲ್ಲಿ ಯಾರ್ಯಾರಿಗೋ ಸನ್ಮಾನ ಮಾಡುತ್ತಾರೆ. ಅಂದು ಸಾಧನೆ ಮಾಡಿ ಸನ್ಮಾನಿಸಿಕೊಂಡವರು ಮುಂದೆ ಒಳ್ಳೆಯ ವ್ಯಕ್ತಿಗಳೂ ಆಗಬಹುದು, ಕ್ರಿಮಿನಲ್ ಗಳೂ ಆಗಬಹುದು. ಅದು ನಮಗೆ ಹೇಗೆ ಗೊತ್ತಾಗುತ್ತದೆ? ಆದರೆ ಇಂತಹ ಫೋಟೋಗಳನ್ನೆಲ್ಲ ಈ ರೀತಿ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವುದು ತಪ್ಪು ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಅನ್ಯಾಯವಾದ ಸಂದರ್ಭದಲ್ಲಿ ಅದನ್ನು ಖಂಡಿಸುವುದು, ಪ್ರತಿಭಟಿಸುವುದು ಸರಿ, ಆದರೆ ಅದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಬಾರದು. ಅವರದೇ ಮನೆಯ ಹೆಣ್ಣು ಮಗಳಿಗೆ ಈ ರೀತಿಯಾದರೆ ಅವರು ರಾಜಕೀಯ ಮಾಡುತ್ತಾರಾ ಎಂದು ಅವರು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣನವರನ್ನು 3 ಸಾವಿರ ತುಂಡು ಮಾಡಿ ಸಂತ್ರಸ್ತರಿಗೆ ಹಂಚಿ
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣವನ್ನು ಕಟುವಾಗಿ ಖಂಡಿಸಿದ ನಿರಂಜನ ಹಿರೇಮಠ, ಅವರಿಗೆ ಎಂತಹ ಶಿಕ್ಷೆ ಕೊಟ್ಟರೂ ಕಡಿಮೆಯೇ. ಅವರನ್ನು ತುಂಡು ತುಂಡು ಮಾಡಿ ಸಂತ್ರಸ್ತ 3 ಸಾವಿರ ಹೆಣ್ಣು ಮಕ್ಕಳಿಗೆ ಹಂಚಬೇಕು ಎಂದು ಆಕ್ರೋಶದಿಂದ ನುಡಿದರು. ಈ ಘಟನೆಯ ವಿರುದ್ಧ ಶೀಘ್ರದಲ್ಲೇ ನಾವೂ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಮೃಣಾಲ್ ಗೆ ಬೆಂಬಲಿಸಿ ಎಂದು ಮನವಿ
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಮೃಣಾಲ ಹೆಬ್ಬಾಳಕರ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ ನಿರಂಜನ ಹಿರೇಮಠ, ಇಂತಹ ಯುವ ಸಂಸದರಿದ್ದರೆ ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತಾರೆ. ನಮಗೆ ನ್ಯಾಯ ಒದಗಿಸುತ್ತಾರೆ. ಹಾಗಾಗಿ ಸಮಾಜದ ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಕೈ ಮುಗಿದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.
ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರಿಗೆ ತಂಪೆರೆದ ‘ಮಳೆರಾಯ’: ನಗರದ ಹಲವೆಡೆ ‘ವರುಣಾರ್ಭಟ’ | Rain in Bengaluru
BREAKING: ಕರ್ನಾಟದ 6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3ರಂದು ಮತದಾನ, ಜೂ.6ಕ್ಕೆ ಫಲಿತಾಂಶ ಪ್ರಕಟ