ಹುಬ್ಬಳ್ಳಿ : ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ಕಳೆದ ಏಪ್ರಿಲ್ 18 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ನೇಹಾ ಹಿರೇಮಠ್ ಹತ್ಯೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಸದ್ಯದಲ್ಲೇ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದೆ.
ಈ ಸಂಬಂಧ ಆರೋಪಿ ಯುವಕ ಫಯಾಜ್ನನ್ನು ಪೊಲೀಸರು ಬಂಧಿಸಿದ್ದರು.ಆರಂಭದಲ್ಲಿ ಆರೋಪಿ ಫಯಾಜ್ನನ್ನು ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದ ಸಿಐಡಿ ಅಧಿಕಾರಿಗಳ ತಂಡ ಕೊಲೆ ನಡೆದ ಸ್ಥಳ, ಚಾಕು ಖರೀದಿಸಿದ ಸ್ಥಳ ಹಾಗೂ ಕ್ಯಾಂಪಸ್ನಲ್ಲಿ ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳ ಸೇರಿದಂತೆ ಹಲವು ಕಡೆ ಕರೆದೊಯ್ದು ಸ್ಥಳ ಮಹಜರು ನಡೆಸಿತ್ತು. ಜೊತೆಗೆ ವಿದ್ಯಾರ್ಥಿನಿ ನೇಹಾಳ ಪೋಷಕರ ವಿಚಾರಣೆಯನ್ನೂ ನಡೆಸಲಾಗಿತ್ತು.
ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ, ಹೋರಾಟ ನಡೆಸಿದ್ದವು. ಘಟನೆಯು ಸಾರ್ವಜನಿಕ ವಲಯದಲ್ಲಿಯೂ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ರಾಜ್ಯ ಸರ್ಕಾರವು ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಲು ಸಿಐಡಿ ತಂಡವನ್ನು ರಚನೆ ಮಾಡಿತ್ತು.
ಇದೀಗ ಸಿಐಡಿ ತಂಡವು ಎಲ್ಲಾ ಆಯಾಮಗಳಲ್ಲೂ ತನಿಖೆಯನ್ನು ಮಾಡಿ ಶೀಘ್ರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಎಲ್ಲಾ ಪ್ರೀತಿಯಿಂದ ಸಿದ್ಧತೆ ಮಾಡಿ ಕೊಂಡಿದೆ ಎಂದು ಹೇಳಲಾಗುತ್ತಿದೆ ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿ ಫಯಾಜ್ ನನ್ನು ಇದೀಗ ಕಸ್ಟಡಿಯಲ್ಲಿರಿಸಿದ್ದು ಮೇ 14ಕ್ಕೆ ಆತನ ಕಸ್ಟಡಿ ಅವಧಿ ಮುಗಿಯಲಿದೆ.