ನವದೆಹಲಿ: NEET-UG 2026ರ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (NTA) ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಸ್ತುತ ಉದ್ಭವಿಸಿರುವ ಪರಿಸ್ಥಿತಿಯನ್ನು “ಅತ್ಯಂತ ಆಘಾತಕಾರಿ” (Very Traumatic) ಎಂದು ಬಣ್ಣಿಸಿರುವ ನ್ಯಾಯಾಲಯ, ವರ್ಷಗಟ್ಟಲೆ ಕಠಿಣ ಪರಿಶ್ರಮ ಪಟ್ಟು, ಭಾವನಾತ್ಮಕವಾಗಿ ಹೂಡಿಕೆ ಮಾಡಿರುವ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ನಿರಾಶೆ ಉಂಟುಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ.
NEET ಪರೀಕ್ಷೆಯ ಪ್ರಕ್ರಿಯೆಯಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸರಣಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರ ನೇತೃತ್ವದ ಪೀಠವು ಎನ್‌ಟಿಎ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿತು.
ಉನ್ನತಾಧಿಕಾರ ಸಮಿತಿ ಇದ್ದರೂ ಲೋಪವಾಗಿದ್ದು ಹೇಗೆ?
ಪರೀಕ್ಷಾ ಸುರಕ್ಷತಾ ಕ್ರಮಗಳನ್ನು ಬಲಪಡಿಸುವ ಉದ್ದೇಶದಿಂದ ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಲಾಗಿದ್ದರೂ ಸಹ ಇಂತಹ ಗಂಭೀರ ಲೋಪ ಹೇಗೆ ಸಂಭವಿಸಿತು ಎಂದು ಪೀಠವು ಪ್ರಶ್ನಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ನರಸಿಂಹ ಅವರು, “ಉನ್ನತಾಧಿಕಾರ ಸಮಿತಿ ಇದ್ದಾಗ್ಯೂ ಇಂತಹ ಘಟನೆ ನಡೆದಿದೆ ಎಂದರೆ, ಸಮಿತಿಯ ಮೂಲ ಶಿಫಾರಸುಗಳಲ್ಲೇ ಏನೋ ಲೋಪವಿರಬೇಕು ಅಥವಾ ಆ ಶಿಫಾರಸುಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತಂದಿಲ್ಲ ಎಂದರ್ಥ” ಎಂದು ಮಾರ್ಮಿಕವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರದಾಯಿತ್ವದ ಕೊರತೆಗೆ ಕಳವಳ
ವಿಚಾರಣೆಯ ವೇಳೆ ಪರೀಕ್ಷಾ ವ್ಯವಸ್ಥೆಯಲ್ಲಿನ ಉತ್ತರದಾಯಿತ್ವದ ಕೊರತೆ ಮತ್ತು ಎನ್‌ಟಿಎ ಕಾರ್ಯಾಚರಣೆಯಲ್ಲಿ ಸಾಂಸ್ಥಿಕ ನಿರಂತರತೆ ಇಲ್ಲದಿರುವ ಬಗ್ಗೆ ಸುಪ್ರೀಂ ಕೋರ್ಟ್ ಪದೇ ಪದೇ ಕಳವಳ ವ್ಯಕ್ತಪಡಿಸಿತು. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಇಂತಹ ಪ್ರತಿಷ್ಠಿತ ಪರೀಕ್ಷೆಯ ಸುರಕ್ಷತೆಯಲ್ಲಿ ಇಷ್ಟೊಂದು ನಿರ್ಲಕ್ಷ್ಯ ವಹಿಸಿರುವುದಕ್ಕೆ ನ್ಯಾಯಾಲಯವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.








