ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದಲ್ಲಿ ಪತ್ತೆಯಾಗಿರುವ ಡ್ರಗ್ ಫ್ಯಾಕ್ಟರಿ ಇದೀಗ ದೇಶಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದೆ. ಮಹಾರಾಷ್ಟ್ರದಲ್ಲಿನ ಡ್ರಗ್ ದಂಧೆ ಕರ್ನಾಟದತ್ತ ತನ್ನ ಕಬಂಧ ಬಾಹುವನ್ನು ಚಾಚಿರುವ ಬಗ್ಗೆ ಸುಳಿವರಿತ ಬೆಂಗಳೂರು ಪೊಲೀಸರೇ ಭಾರೀ ಕಾರ್ಯಾಚರಣೆಗೆ ತಯಾರಿ ನಡೆಸಿದ್ದರು. ಆ ಹೊತ್ತಿಗೆ ಮಹಾರಾಷ್ಟ್ರ ANTF ಮತ್ತು ಎನ್‌ಸಿಬಿ ಅಧಿಕಾರಿಗಳು ಬೆಂಗಳೂರು ಪೊಲೀಸರ ಜೊತೆ ಚರ್ಚಿಸಿದರು. ಅದಾಗಲೇ ತಾವು ದಾಳಿಗೆ ತಯಾರಿ ನಡೆಸಿದ್ದ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಪೊಲೀಸರ ಜೊತೆ ಎನ್‌ಸಿಬಿ ಅಧಿಕಾರಿ ಸಾಥ್ ನೀಡಿದರು. ಈ ಮೂಲಕ ಬೆಂಗಳೂರು ಪೊಲೀಸರ ನೇತೃತ್ವದಲ್ಲೇ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಬೃಹತ್ ಡ್ರಗ್ ಜಾಲ ಪತ್ತೆಯಾಗಿದೆ.
ಕೇಂದ್ರ ಗುಪ್ತ ದಳದ ಮಾಹಿತಿ ಪ್ರಕಾರ, ಬಾಗಲೂರು ಮತ್ತು ಕೊತ್ತನೂರು ಠಾಣೆಗಳ ಗಡಿ ಭಾಗದಲ್ಲಿ ಡ್ರಗ್ ಹೊಂದಿಸಿಕೊಂಡು ಅದನ್ನು ವಿತರಿಸುವ ಸಂಚು ಈ ಮಾಫಿಯಾದಿಂದ ನಡೆಯುತ್ತಿತ್ತು. ಬೆಂಗಳೂರು ಪೊಲೀಸರ ಕಣ್ಣುತಪ್ಪಿಸಿ ಈ ದಂಧೆ ನಡೆಸುತ್ತಿದ್ದ ಮಾಫಿಯಾ ತಮ್ಮ ನೆಲೆಯನ್ನು ರಾಜ್ಯದಿಂದ ರಾಜ್ಯಕ್ಕೆ ಬದಲಾಯಿಸುತ್ತಿತ್ತು.
ಇತ್ತೀಚೆಗಷ್ಟೇ ಬೆಂಗಳೂರು ಹೊರವಲಯದಲ್ಲಿ ಬೀಡು ಬಿಟ್ಟು ದಂಧೆ ಆರಂಭಕ್ಕೆ ತಯಾರಿ ನಡೆಸಿತ್ತು. ಈ ಪ್ರದೇಶಗಳು ಇತ್ತೀಚೆಗಷ್ಟೇ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಸೇರಿದ್ದರಿಂದ ಹಾಗೂ ಪೊಲೀಸರ ಓಡಾಟ ಕಡಿಮೆ ಇರಬಹುದೆಂಬ ಭ್ರಮೆಯಿಂದ ಈ ಡ್ರಗ್ ಮಾಫಿಯಾವು ತನ್ನ ರಹಸ್ಯ ಚಟುವಟಿಕೆಗೆ ಈ ಪ್ರದೇಶಗಳನ್ನೇ ಆಯ್ಕೆ ಮಾಡಿತ್ತೆನ್ನಲಾಗಿದೆ.
ಅದಾಗಲೇ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಒಬ್ಬಾತ, ಒಂದಷ್ಟು MDMA ಹಾಗೂ ಮಾದಕ ದ್ರವ್ಯಗಳನ್ನು ಅವಲಹಳ್ಳಿಯ ಮನೆಯೊಂದಕ್ಕೆ ಸಾಗಿಸಿದ್ದಾನೆ. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ವೈಟ್ ಫೀಲ್ಡ್ ಉಪವಿಭಾಗದ ಪೊಲೀಸರು ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ಮಹಾರಾಷ್ಟ್ರ ANTF ಮತ್ತು ಎನ್‌ಸಿಬಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಬೆಂಗಳೂರು ಪೊಲೀಸರ ಜೊತೆಯಲ್ಲೇ ಮಹಾರಾಷ್ಟ್ರ ಹಾಗೂ ಕೇಂದ್ರದ ತಂಡಗಳು ಯಶಸ್ವೀ ಜಂಟಿ ಕಾರ್ಯಾಚರಣೆ ನಡೆಸಿವೆ.
ಬೆಂಗಳೂರು ಪೊಲೀಸರದ್ದೇ ಪ್ರಮುಖ ಪಾತ್ರ!
ಬೆಂಗಳೂರಿನಲ್ಲಿ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ದಂಧೆ ನಡೆಸಲಾಗುತ್ತಿದ್ದ ಸಂಗತಿ ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿವೆ. ಈ ದಂಧೆಕೋರರು ಇತ್ತೀಚೆಗಷ್ಟೇ ಕರ್ನಾಟಕಕ್ಕೆ ಲಗ್ಗೆ ಹಾಕಿದ್ದಾರೆ. ಆದರೆ, ಅಷ್ಟರಲ್ಲೇ ಬೆಂಗಳೂರು ಪೊಲೀಸರು ಈ ಜಾಲವನ್ನು ಬೇಧಿಸಲು ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರು ಪೊಲೀಸರ ಪರಿಶ್ರಮವೇ ತಮ್ಮ ಈ ಕಾರ್ಯಾಚರಣೆ ಯಶಸ್ವಿಯಾಗಲು ಕಾರಣವಾಯಿತು ಎಂದು ಮಹಾರಾಷ್ಟ್ರ ANTF ಮತ್ತು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಡ್ರಗ್ ಫ್ಯಾಕ್ಟರಿ ದಂಧೆಯಲ್ಲಿ ಸೆರೆಸಿಕ್ಕವರು ಹೊರ ರಾಜ್ಯದವರೇ ಆಗಿದ್ದು, ಅದರ ಮೂಲವನ್ನು ಪತ್ತೆಹಚ್ಚುವಲ್ಲಿ ಎನ್‌ಸಿಬಿ ಅಧಿಕಾರಿಗಳು ಪ್ರಯತ್ನ ಮುಂದುವರಿಸಿದ್ದಾರೆ.
ಬೆಂಗಳೂರು ವ್ಯಾಪ್ತಿಯಲ್ಲಿ ಡ್ರಗ್ ಜಾಲವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ರಹಸ್ಯ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅದರಲ್ಲೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪೊಲೀಸರು ನಿಗಾ ವಹಿಸಿದ್ದಾರೆ. ಬೆಂಗಳೂರು ಪೊಲೀಸರ ಈ ಕಾರ್ಯತಂತ್ರದಿಂದಾಗಿಯೇ ಬೃಹತ್ ಡ್ರಗ್ ಜಾಲ ಖೆಡ್ಡಾಕ್ಕೆ ಬಿದ್ದಿವೆ. ಹೊರ ರಾಜ್ಯಗಳ ಮಾಫಿಯಾದ ಡ್ರಗ್ ಜಾಲವನ್ನು ಬೇಧಿಸುವ ಪ್ರಯತ್ನ ನಡೆದಿರುವಾಗಲೇ ಎನ್‌ಸಿಬಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದರಿಂದ, ಸಹಜವಾಗಿಯೇ ಕಾರ್ಯಾಚರಣೆಯಲ್ಲಿ ಕೇಂದ್ರ ತಂಡದ ನೇತೃತ್ವವು ಕೇಂದ್ರಬಿಂದುವಾಯಿತು ಎನ್ನಲಾಗಿದೆ.
ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut








