ಮುಂಬೈ:ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ನೌಕಾಸೇನೆಯು ಪಾಕಿಸ್ತಾನದ ಮೇಲೆ ಸಮುದ್ರದ ಮೂಲಕ ಭೀಕರ ದಾಳಿ ನಡೆಸಲು ಕೇವಲ ಕೆಲವೇ ನಿಮಿಷಗಳಷ್ಟು ಬಾಕಿ ಇತ್ತು. ಆದರೆ, ಪಾಕಿಸ್ತಾನವು ದಾಳಿ ನಿಲ್ಲಿಸುವಂತೆ ವಿನಂತಿಸಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ನೌಕಾಸೇನಾ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಬಹಿರಂಗಪಡಿಸಿದ್ದಾರೆ.
2025ರ ಏಪ್ರಿಲ್ನಲ್ಲಿ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ‘ಆಪರೇಷನ್ ಸಿಂಧೂರ್’ ಆರಂಭಿಸಿತ್ತು. ಈ ವೇಳೆ ಭಾರತೀಯ ನೌಕಾಸೇನೆಯು ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಗಡಿಯ ತೀರದವರೆಗೂ ತಲುಪಿ ದಾಳಿಗೆ ಸಿದ್ಧವಾಗಿತ್ತು. ಭಾರತದ ಆಕ್ರಮಣಕಾರಿ ನಿಲುವನ್ನು ಕಂಡು ಬೆಚ್ಚಿಬಿದ್ದ ಪಾಕಿಸ್ತಾನವು, ತನ್ನ ನೌಕಾಪಡೆಯನ್ನು ಬಂದರುಗಳಿಂದ ಹೊರಬರದಂತೆ ತಡೆದಿತ್ತು. ಅಲ್ಲದೆ, ದಾಳಿ ನಡೆಸದಂತೆ ಸಂವಹನ ನಡೆಸಿ ವಿನಂತಿಸಿಕೊಂಡಿತ್ತು ಎಂದು ಅಡ್ಮಿರಲ್ ತಿಳಿಸಿದ್ದಾರೆ.
“ನಾವು ಸಮುದ್ರದಿಂದ ದಾಳಿ ನಡೆಸಲು ಸಜ್ಜಾಗಿದ್ದೆವು, ಗುರಿಗಳೂ ನಿಗದಿಯಾಗಿದ್ದವು. ಆದರೆ ದಾಳಿಗೆ ಕೆಲವೇ ನಿಮಿಷಗಳಿರುವಾಗ ಶತ್ರು ರಾಷ್ಟ್ರವು ದಾಳಿ ನಿಲ್ಲಿಸಲು (Stoppage of kinetic actions) ಮನವಿ ಮಾಡಿತು,” ಎಂದು ಅವರು ವಿವರಿಸಿದ್ದಾರೆ. ಕಾರ್ಯಾಚರಣೆಯು ಭಾರತೀಯ ನೌಕಾಸೇನೆಯ ಕ್ಷಿಪ್ರ ಸಿದ್ಧತೆ ಮತ್ತು ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ನೌಕಾಸೇನೆಯ ಈ ದೃಢವಾದ ನಿಲುವಿನಿಂದಾಗಿ ಪಾಕಿಸ್ತಾನದ ಆರ್ಥಿಕತೆಯ ಮೇಲೂ ಹೊಡೆತ ಬಿದ್ದಿತ್ತು ಎಂದು ಅವರು ತಿಳಿಸಿದರು.








