ದಕ್ಷಿಣಕನ್ನಡ : ನಟ ನಿರ್ದೇಶಕರಾದ ಉಪೇಂದ್ರ ಅವರ ಸಿನೆಮಾಗಳು ಒಂದು ಸಲ ನೋಡಿದ್ರೆ ಅರ್ಥವಾಗಲ್ಲ. ಇದೀಗ ಅವರ ನಟನೆಯ ಬುದ್ಧಿವಂತ ಸಿನೆಮಾ ಸ್ಟೈಲ್ ನಲ್ಲಿ ಮಹಿಳೆಯರಿಗೆ ವಂಚಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ಕಿಲಾಡಿ ಕಳ್ಳನೊಬ್ಬ ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾನೆ.
ಹೌದು ಮಹಿಳೆಯರಿಗೆ ವಂಚನೆ ಮಾಡಿ ಕೋರ್ಟ್ನಲ್ಲಿ ನಾನವನಲ್ಲ. ನಾನವನಲ್ಲ ಎಂದು ಪ್ರೇಕ್ಷಕರನ್ನು ರಂಜಿಸಿದ್ದ ಉಪೇಂದ್ರ ಅವರ ಬುದ್ದಿವಂತ ಸಿನಿಮಾದಂತೆ ಇಲ್ಲೊಬ್ಬ ರಿಯಲ್ ಲೈಫ್ನಲ್ಲಿ ಇದೇ ರೀತಿ ಸಾಕಷ್ಟು ಮಹಿಳೆಯರಿಗೆ ವಂಚನೆ ಮಾಡಿ ಎಸ್ಕೇಫ್ ಆಗುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದ ರೋಹಿತ್ ಮಥಾಯೀಸ್ ಎಂಬಾತ 2019 ರಲ್ಲಿ ಪಕ್ಕದ ಮನೆಯಲ್ಲಿ ವಾಸವಿದ್ದ ನಿವೃತ್ತ ಪಿಡಿಓ ಭರತಲಕ್ಷ್ಮಿ ಎಂಬವವರನ್ನು ಕೊಂದು ಅವರ ಮನೆಯಲ್ಲಿ ಚಿನ್ನಾಭರಣವನ್ನು ಲೂಟಿ ಮಾಡಿದ್ದ. ನಂತರ ಶವವನ್ನು ಬಾವಿಗೆ ಬಿಸಾಕಿದ್ದ. ಬಂಧನವಾಗಿ ಜಾಮೀನಿನ ಮೇಲೆ ಹೊರಬಂದು ಮುಂಬೈ ಸೇರಿಕೊಂಡಿದ್ದ.
ಬಳಿಕ ಫೇಸ್ ಬುಕ್ನಲ್ಲಿ ಕರಾವಳಿ ಭಾಗದ ಅದರಲ್ಲೂ ಕ್ರಿಶ್ಚಿಯನ್ ಧರ್ಮದ ಮಹಿಳೆಯರನ್ನು ಸಂಪರ್ಕ ಮಾಡುತ್ತಿದ್ದ. ಅಂದ ಚೆಂದದ ಶ್ರೀಮಂತ ಮಹಿಳೆಯರನ್ನು ತನ್ನ ಬಲೆಗೆ ಕೆಡವಿಕೊಳ್ಳುತ್ತಿದ್ದ. ವಿಧವೆಯರು, ಡಿವೋರ್ಸ್ಗಳಂತಹ ಒಂಟಿ ಮಹಿಳೆಯರನ್ನು ಗುರುತಿಸಿ ಅವರ ಸಂಪರ್ಕ ಸಾಧಿಸುತ್ತಿದ್ದ. ಬಳಿಕ ಪ್ರೀತಿ ನಾಟಕವಾಡಿ ಅವರ ಮನೆ ಸೇರಿಕೊಂಡು ದೈಹಿಕ ಸಂಪರ್ಕ ಬೆಳಸುತ್ತಿದ್ದ. ಇದೆಲ್ಲಾ ಆದ ನಂತರ ಒಂದು ದಿನ ಅವರ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಿದ್ದ.
ಇದರ ಮಧ್ಯ ಮಂಗಳೂರಿನ ಅನಿತಾ ಎಂಬ ಶ್ರೀಮಂತ ಮಹಿಳೆ ಇಸ್ರೇಲ್ನಲ್ಲಿ ವಾಸವಾಗಿದ್ದರು. ಈಕೆಯನ್ನು ಬಲೆಗೆ ಬೀಳಿಸಿಕೊಂಡಿದ್ದ ರೋಹಿತ್ ಮಥಾಯೀಸ್, ಪ್ರೀತಿಯ ನಾಟಕವಾಡಿದ್ದ. ಬುದ್ಧಿವಂತನ ನಾಟಕಕ್ಕೆ ಫಿದಾ ಆಗಿದ್ದ ಅನಿತಾ ಇಸ್ರೇಲ್ ನಿಂದ ಮಂಗಳೂರಿಗೆ ಹಾರಿದ್ದರು.
ತಾನು ಇಂತಹ ವ್ಯಕ್ತಿಯ ಜೊತೆಗೆ ಮದುವೆಯಾಗುತ್ತಿದ್ದೇನೆ ಎಂದು ಅನಿತಾ ತನ್ನ ಸ್ನೇಹಿತೆಯ ಬಳಿ ಹೇಳಿಕೊಂಡಿದ್ದರು. ಯಾವಾಗ ಈತನ ಬಗ್ಗೆ ಅನಿತಾ ಸ್ನೇಹಿತೆಗೆ ಗೊತ್ತಾಯ್ತೋ ಕೂಡಲೇ ಇಬ್ಬರು ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನನ್ನಲಿರುವ ಚಿನ್ನ ನಿನ್ನ ಬಳಿ ಸೇಫ್ ಆಗಿರುತ್ತದೆ ಎಂದು ಆತನನ್ನು ಮುಂಬೈನಿಂದ ಮಂಗಳೂರಿಗೆ ಬಂದಿದ್ದಾನೆ ಬಂದ ತಕ್ಷಣ ಕೂಡಲೇ ಪೊಲೀಸರು ಆತನನ್ನು ಬಂಧಿಸಿ, ಸದ್ಯ ಏಳು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.