ಬೆಂಗಳೂರು : ನಂದಿನಿ ಹಾಲಿನ ದರ ಹೆಚ್ಚಳವಾಗುತ್ತಿದ್ದಂತೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ನಂದಿನಿ ಹಾಲಿನ ದರ ಏರಿಕೆ ಮಾಡಿರುವ ಎರಡು ರೂಪಾಯಿ ನೇರವಾಗಿ ರೈತರಿಗೆ ತಲುಪುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ಹಾಲಿನ ದರ ಏರಿಕೆ ಆಗಿರುವ 2 ರೂಪಾಯಿ ರೈತರಿಗೆ ತಲುಪುತ್ತದೆ. ರೈತರಿಗೆ ಹಣ ತಲುಪುವುದಿಲ್ಲ ಅನ್ನುವುದನ್ನು ಯಾರು ಹೇಳಿದರು? ಕೆಎಂಎಸ್ ಉಳಿದರೆ ರೈತರು ಉಳಿದಂತೆ. ರೈತರು ಸಾಲದಿಂದ ಹಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಿಜೆಪಿಯವರ ರೈತ ವಿರೋಧಿ ಧೋರಣೆ ಎದ್ದು ಕಾಣುತ್ತದೆ ಎಂದು ತಿಳಿಸಿದರು.
ನಮ್ಮಲ್ಲಿ ಹಾಲಿನ ದರ ಎಷ್ಟಿದೆ, ಮಹಾರಾಷ್ಟ್ರದಲ್ಲಿ ಎಷ್ಟಿದೆ, ಬೇರೆ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ಎನ್ನುವುದನ್ನು ಬಿಜೆಪಿ ಅವರು ಮೊದಲು ತಿಳಿದುಕೊಳ್ಳಲಿ ಆಮೇಲೆ ಬೆಲೆ ಏರಿಕೆ ಕುರಿತು ಮಾತನಾಡಲಿ ಎಂದು ತಿರುಗೇಟು ನೀಡಿದರು.
ಇನ್ನೂ ಇದೆ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ದರ ಹೆಚ್ಚಳ ಮಾಡಿರುವುದು ರೈತರು ಏನು ಹಾಲು ಹೆಚ್ಚು ಉತ್ಪಾದನೆ ಮಾಡುತ್ತಿದ್ದಾರೆ ಅದನ್ನು ಖರೀದಿ ಮಾಡಲು ಮಾರುಕಟ್ಟೆ ಮಾಡಲು ಎರಡು ರೂಪಾಯಿ ಹೆಚ್ಚಿಗೆ ಮಾಡಿದ್ದಾರೆ.ಕೇವಲ 2 ರುಪಾಯಿ ಅಷ್ಟೇ ಅಲ್ಲ ಹಾಲಿನ ಒಂದು ಪ್ರಮಾಣ ಕೂಡ ಹೆಚ್ಚಳ ಮಾಡಲಾಗಿದೆ. ಹತ್ತು ವರ್ಷ ಆದಮೇಲೆ ಬೆಲೆ ಏರಿಕೆ ಕುರಿತು ಬಿಜೆಪಿ ಮಾತನಾಡುತ್ತಿರುವುದು ಸಂತೋಷದ ವಿಷಯ.
ಯಾರು ಹತ್ತು ವರ್ಷದಿಂದ ಈ ದೇಶವನ್ನು ಆಳುತ್ತಿರುವುದು? ಯಾರು ನೋಟ್ ಬ್ಯಾನ್ ತಂದಿದ್ದು? ಯಾರು ಅವೈಜ್ಞಾನಿಕವಾಗಿ ಲಾಕ್ ಡೌನ್ ಮಾಡಿದ್ದು? 50 ವರ್ಷದಲ್ಲಿ ಇರದೇ ಇರುವಂತಹ ನಿರುದ್ಯೋಗ ಸೃಷ್ಟಿ ಮಾಡಿದ್ದು ಯಾರು? ಬೆಲೆ ಏರಿಕೆಗೆ ಕಾರಣ ಸಿದ್ದರಾಮಯ್ಯನವರ ಅಥವಾ ನರೇಂದ್ರ ಮೋದಿನ? ಎಲ್ಲವನ್ನು ಹೋಲಿಕೆ ಮಾಡಲಿ. ಬಿಜೆಪಿ ರಾಜ್ಯಗಳಲ್ಲಿ ಹಾಲಿನ ದರ ಎಷ್ಟಿದೆ, ನಮ್ಮ ರಾಜ್ಯದಲ್ಲಿ ಎಷ್ಟಿದೆ ಎಂದು ಕುರಿತು ಬಿಜೆಪಿಯವರು ಚರ್ಚಿಸಲಿ ಎಂದು ತಿಳಿಸಿದರು.