ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಮಾಡಲಾದ ದೀಪಾಲಂಕಾರವನ್ನು ಇನ್ನೂ ಹತ್ತು ದಿನಗಳ ಕಾಲ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಮೈಸೂರು ನಗರದ ಸುತ್ತಮುತ್ತಲು ಸುಮಾರು 124 ಕಿ.ಮೀ ಸುತ್ತ, 96 ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಪ್ರಮುಖ ವೃತ್ತಗಳಲ್ಲಿ 28 ವಿವಿಧ ಬಗೆಯ ಪ್ರತಿಕೃತಿಗಳನ್ನು ದೀಪಾಲಂಕರದಲ್ಲಿ ನಿರ್ಮಿಸಲಾಗಿದೆ ಎಂದರು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಸಂಪೂರ್ಣ ಯಶಸ್ಸು ಕಂಡಿದೆ. ಈ ಯಶಸ್ಸಿಗೆ ಕಾರಣೀಭೂತರಾದ ಸಂಸದರು, ಶಾಸಕರು, ಪಾಲಿಕೆ ಸದಸ್ಯರು, ದಸರಾ ಉಪಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಪತ್ರಕರ್ತರು, ಮೈಸೂರು ಜನತೆಗೆ ಅಭಿನಂದನೆಗಳು ಎಂದು ಹೇಳಿದರು.