ಬೆಂಗಳೂರು : ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಬುಧವಾರ ನಡೆದ ಕೆರೆ ತುಂಬಿಸುವ ಯೋಜನೆ ಯನ್ನು ಸಿಎಂ ಸಿದ್ದರಾಮಯ್ಯ ಅವರು ‘ಬಟನ್’ ಒತ್ತುವ ಮೂಲಕ ಉದ್ಘಾಟಿಸಿದಾಗ ಅವು ಚಾಲನೆ ಯಾಗದೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತೀವ್ರ ಮುಜುಗರ ಅನುಭವಿಸಿದ್ದರು.ಈ ಘಟನೆಯ ಬೆನ್ನಲ್ಲೇ ‘ಸೆಸ್ಕ್’ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶ್ರೀಧರ್ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇಟ್ಟು ತಕ್ಷಣದಿಂದ ಸೇವೆಯಿಂದ ಅಮಾನತು ಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿ ಯಿಂದ ನೀರು ಎತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಉದ್ಘಾಟನಾ ಸಮಾರಂಭ ನಿಗದಿಯಾಗಿತ್ತು . ಸಿಎಂ ಸಿದ್ದರಾಮಯ್ಯ ಅವರು ಬಟನ್ ಒತ್ತುವ ಮೂಲಕ ಯೋಜನೆಗೆ ಚಾಲನೆ ನೀಡಿದರೂ ಅದು ಚಾಲನೆಯಾಗಲಿಲ್ಲ. ಇದರಿಂದ ಸಿಎಂ ಸೇರಿದಂತೆ ಇತರೆ ಗಣ್ಯರು ಮುಜುಗರಪಡುವಂತಾಯಿತು.
ಕಾರ್ಯಕ್ರಮಕ್ಕೆ ಅಗತ್ಯ ಮುನ್ನೆಚ್ಚರಿಕೆಕ್ರಮಗಳನ್ನು ಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿಗಳು ಹಿಂದೆಯೇ ಸೂಚಿಸಿದ್ದರು. ಹಾಗಿದ್ದರೂ ‘ಸೆಸ್ಕ್’ ವ್ಯವಸ್ಥಾಪಕ ನಿರ್ದೇಶಕರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿರಲಿಲ್ಲ. ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ಸ್ಥಳದಲ್ಲಿ ಹಾಜರಿದ್ದು ವ್ಯವಸ್ಥಿತವಾಗಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುವಂತೆ ಮೇಲ್ವಿಚಾರಣೆ ನಡೆಸದೆ ಕರ್ತವ್ಯದಲ್ಲಿ ಅಸಡ್ಡೆ, ನಿರ್ಲಕ್ಷ್ಯ ತೋರಿದ ಪರಿಣಾಮ ಸರಕಾರಕ್ಕೆ ಮುಜುಗರವಾಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.