ಮೈಸೂರು : ಮಕ್ಕಳನ್ನು ಸಾಕುವುದಕ್ಕೆ ಕಷ್ಟ ಆಗುತ್ತಿದೆ ಎಂದು ತಂದೆ ತಾಯಿ ಎರಡು ವರ್ಷದ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ಹೌದು ನಂಜನಗೂಡು ಪಟ್ಟಣದ ನೀಲಕಂಠೇಶ್ವರ ನಗರದಲ್ಲಿ ತಂದೆ ತಾಯಿಗಳಿಬ್ಬರು ಎರಡು ವರ್ಷದ ತಮ್ಮ ಹೆಣ್ಣು ಮಗುವನ್ನು 14 ಸಾವಿರಕ್ಕೆ ಮಾರಾಟ ಮಾಡಿದ್ದಾರೆ.ನಂಜನಗೂಡು ಪಟ್ಟಣದ ದಂಪತಿ ತಮ್ಮ ಮೂರು ಮಕ್ಕಳಲ್ಲಿ ಎರಡು ವರ್ಷದ ಹೆಣ್ಣು ಮಗುವನ್ನು ಮಧ್ಯವರ್ತಿ ಸಹಾಯದಿಂದ ಚಾಮರಾಜನಗರ ಜಿಲ್ಲೆಯ ಗ್ರಾಮವೊಂದಕ್ಕೆ ಮಾರ್ಚ್ 13 ರಂದು 14 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಅಂಗನವಾಡಿ ಶಿಕ್ಷಕಿ, ಮಗು ಮಾರಾಟದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ವಿಚಾರ ತಿಳಿದ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಕ್ಷಣ ಮಗುವನ್ನು ರಕ್ಷಿಸಿ ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಂದೆ – ತಾಯಿ, ಹಾಗೂ ಮಗುವನ್ನು ಮಾರಾಟ ಮಾಡಿಸಿದ ಮಧ್ಯವರ್ತಿ ವಿರುದ್ಧ ಗುರುವಾರ ನಂಜನಗೂಡು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮಗುವಿನ ತಂದೆ – ತಾಯಿ, ಹಾಗೂ ಮಧ್ಯವರ್ತಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.