ಮೈಸೂರು : ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಜಂಬೂ ಸವಾರಿಯ ದಿನ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ರಾಷ್ಟ್ರಗೀತೆ ನುಡಿಸುವಾಗ ಸಾಂಪ್ರದಾಯಿಕ ಕುಶಾಲತೋಪುಗಳನ್ನು ಸಿಡಿಸಿ ಗೌರವ ಸಮರ್ಪಣೆ ಮಾಡುವುದು ಸಂಪ್ರದಾಯ. ಇಂತಹ ಕುಶಾಲತೋಪು ಸಿಡಿಸುವ ಕಾರ್ಯಕ್ರಮಕ್ಕೆ ಅರಮನೆಯ ಆನೆ ಬಾಗಿಲಿನಲ್ಲಿ ಫಿರಂಗಿ ಒಣ ತಾಲೀಮಿನ ಅಭ್ಯಾಸ ನಡೆಸಲಾಗುತ್ತಿದೆ.
ವಿಶ್ವವಿಖ್ಯಾತ ಜಂಬೂ ಸವಾರಿ ದಿನ ಅರಮನೆಯ ಹೊರಭಾಗದಲ್ಲಿ ಚಾಮುಂಡಿ ತಾಯಿ ಚಿನ್ನದ ಅಂಬಾರಿಯಲ್ಲಿ ಆನೆ ಮೇಲೆ ಆಸೀನಳಾಗಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಪುಷ್ಪಾರ್ಚನೆ ಮಾಡಿದ ತಕ್ಷಣ ಪೊಲೀಸ್ ಬ್ಯಾಂಡ್ನಿಂದ ರಾಷ್ಟ್ರಗೀತೆ ನುಡಿಸುತ್ತಾರೆ. ಆ ಸಂದರ್ಭದಲ್ಲಿ ರಾಷ್ಟ್ರಗೀತೆ ನುಡಿಸುವಾಗ 52 ಸೆಕೆಂಡ್ಗಳಲ್ಲಿ 21 ಸುತ್ತು ಕುಶಾಲತೋಪುಗಳನ್ನು 7 ಫಿರಂಗಿಗಳಿಂದ ಹಾರಿಸಲಾಗುತ್ತದೆ.
ನಗರದ ಸಶಸ್ತ್ರ ಪಡೆಯ 31 ನುರಿತ ಸಿಬ್ಬಂದಿ ಕುಶಾಲತೋಪು ಸಿಡಿಸುವ ತಾಲೀಮಿಗೆ ಅಭ್ಯಾಸ ನಡೆಸುವುದೇ ಒಣ ತಾಲೀಮು. ಅರಮನೆಯ ಮುಂಭಾಗದ ಆನೆ ಬಾಗಿಲಿನಲ್ಲಿ ಫಿರಂಗಿಗಳ ಕುಶಾಲತೋಪು ತಾಲೀಮನ್ನು ಪ್ರತಿನಿತ್ಯ ನಡೆಸುತ್ತಾರೆ. ಬಳಿಕ ಗಜಪಡೆಗೆ 3 ಸುತ್ತು ಸಿಡಿಮದ್ದು ಸಿಡಿಸಿ, ಸಿಡಿಮದ್ದು ತಾಲೀಮನ್ನು ನಡೆಸುತ್ತಾರೆ. ಏಕೆಂದರೆ ಜಂಬೂ ಸವಾರಿಯ ದಿನ ಗಜಪಡೆ ಶಬ್ದಕ್ಕೆ ಹೆದರದೇ ಇರಲಿ, ಸುಸೂತ್ರವಾಗಿ ಜಂಬೂ ಸವಾರಿ ತಾಲೀಮು ನಡೆಯಲಿ ಎಂಬ ಉದ್ದೇಶವಾಗಿದೆ.
1260 ರಲ್ಲಿ ಚೀನಿಯರು ಆವಿಷ್ಕರಿಸಿದರು
ಸುಮಾರು 12ನೇ ಶತಮಾನದಿಂದ ಆರಂಭವಾದ ಬಗ್ಗೆ ಮಾಹಿತಿ ಸಿಗುತ್ತದೆ. ಇದನ್ನು ಮೊಟ್ಟ ಮೊದಲಿಗೆ 1260 ರಲ್ಲಿ ಚೀನಿಯರು ಆವಿಷ್ಕರಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಿದರು ಎನ್ನಲಾಗುತ್ತದೆ. ಅದಾದ ನಂತರ 13ನೇ ಶತಮಾನದಲ್ಲಿ ಲಿಬಿಯಾ ದೇಶವು ಸ್ಪೇನ್ ದೇಶದ ವಿರುದ್ಧದ ಯುದ್ಧದಲ್ಲಿ ಪ್ರಪ್ರಥಮವಾಗಿ ಫಿರಂಗಿಯನ್ನು ಬಳಸಿತು ಎಂಬ ಮಾಹಿತಿಗಳಿವೆ. ಇದಾದ ಬಳಿಕ 16ನೇ ಶತಮಾನದಲ್ಲಿ ಸುಧಾರಿತ ಫಿರಂಗಿಗಳ ನಿರ್ಮಾಣ ನಡೆದುದನ್ನು ಕಾಣಬಹುದಾಗಿದೆ.
ಟಿಪ್ಪು ಸುಲ್ತಾನ್ ಕಾಲದಲ್ಲಿ ಫಿರಂಗಿಗಳು ಇನ್ನಷ್ಟು ಸುಧಾರಣೆ ಕಂಡು ಸುಮಾರು 10 ಅಡಿ ಉದ್ದ, 9,100 ಕೆ.ಜಿ ತೂಕದ ಉಕ್ಕಿನ ಫಿರಂಗಿಗಳನ್ನು ತಮ್ಮ ಆಡಳಿತಾವಧಿಯಲ್ಲಿ ಯುದ್ಧದಲ್ಲಿ ಬಳಸಲಾಯಿತು. ಅವತ್ತಿನ ಫಿರಂಗಿ ಇವತ್ತಿಗೂ ಈಗಲೂ ಶ್ರೀರಂಗಟ್ಟಣದ ದರಿಯಾ ದೌಲತ್ ಅರಮನೆಯ ಮುಂಭಾಗದಲ್ಲಿದೆ.
ಫಿರಂಗಿಯಿಂದ 21 ಬಾರಿ ಕುಶಾಲತೋಪು
ಅಂದು ಮೈಸೂರು ರಾಜರ ಶಕ್ತಿಯಾಗಿ ಹೋರಾಟದಲ್ಲಿ ಗಮನಸೆಳೆದಿದ್ದ ಫಿರಂಗಿಗಳು ಈಗ ಮ್ಯೂಸಿಯಂ ಸೇರಿವೆ. ದಸರಾ ಸಂದರ್ಭದಲ್ಲಿ ಹೊರತೆಗೆದು ಸ್ವಚ್ಛಗೊಳಿಸಿ ವಿಜಯ ಗಣಪತಿ ಪೂಜೆ ಸಲ್ಲಿಸುವ ಮೂಲಕ ಕುಶಾಲ ತೋಪು ಸಿಡಿಸಲು ಮತ್ತು ಮೆರವಣಿಗೆಗೆ ಅದಕ್ಕೂ ಮೊದಲು ಗಜಪಡೆ ಮತ್ತು ಕುದುರೆಗಳು ಬೆದರದಂತೆ ಸಿಡಿಮದ್ದು ತಾಲೀಮಿಗೆ ಬಳಸಿಕೊಳ್ಳಲಾಗುತ್ತಿದೆ.
ಇನ್ನು ದಸರಾ ಜಂಬೂಸವಾರಿ ಹೊರಡುವ ಸಂದರ್ಭ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಆರಂಭಿಸಿ ಅದು ಮುಗಿಯುವುದರೊಳಗಾಗಿ 21 ಬಾರಿ ಕುಶಾಲ ತೋಪುಗಳನ್ನು ಇದೇ ಫಿರಂಗಿಯಿಂದ ಸಿಡಿಸಲಾಗುತ್ತದೆ. ಫಿರಂಗಿ ಮೂಲಕ ಕುಶಾಲತೋಪು ಸಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ತರಬೇತಿ ಬೇಕಾಗುತ್ತದೆ.
ಕುಶಾಲು ತೋಪು ಹೇಗೆ ಸಿಡಿಸುತ್ತಾರೆ ಗೊತ್ತಾ?
ಫಿರಂಗಿ ಸಿಡಿಸುವಾಗ ಬಹಳಷ್ಟು ಅವಘಡ ಸಂಭವಿಸಿದೆ. ಹೀಗಾಗಿ ಸಿಬ್ಬಂದಿಗೆ ವಿಮೆ ಮಾಡಿಸುವ ಯೋಜನೆ ಜಾರಿಗೆ ಬಂದಿದೆ. ಇಷ್ಟಕ್ಕೂ ಫಿರಂಗಿಯಲ್ಲಿ ಕುಶಾಲತೋಪು ಸಿಡಿಸುವುದಾದರೂ ಹೇಗೆ ಎನ್ನುವುದನ್ನು ನೋಡುವುದಾದರೆ ಸುಮಾರು ಮೂರೂವರೆ ಅಡಿ ಉದ್ದದ ಫಿರಂಗಿ ಕೊಳವೆಗೆ ಹದಮಾಡಿದ ಸುಮಾರು ಮೂರು ಕಿಲೋಗ್ರಾಂ ನಷ್ಟು ರಂಜಕದ ಪುಡಿಯನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಆಯತಕಾರದ ಪೊಟ್ಟಣದಂತೆ ಮಾಡಲಾಗುತ್ತದೆ. ಅದನ್ನು ಕೊಳವೆಗೆ ಹಾಕಿ ನಂತರ ಕಬ್ಬಿಣದ ಸಾಧನವೊಂದರ ಮೂಲಕ ತಳ್ಳಿ ಗಟ್ಟಿಗೊಳಿಸಲಾಗುತ್ತದೆ. ನಂತರ ಅದಕ್ಕೆ ಬೆಂಕಿ ಹಚ್ಚಿದಾಗ ಅದು ಭಾರೀ ಶಬ್ಧದೊಂದಿಗೆ ಸ್ಫೋಟಗೊಳ್ಳುತ್ತದೆ.
ಇದಾದ ನಂತರ ಮತ್ತೆ ಆ ಬಿಸಿಯಿರುವ ಕೊಳವೆಯನ್ನು ಸಿಂಬ ಎಂಬ ಸಾಧನದಿಂದ ಸ್ವಚ್ಛಗೊಳಿಸುತ್ತಾರೆ. ಇದು ಸುಲಭದ ಕೆಲಸವಲ್ಲ. ಏಕೆಂದರೆ ಇಲ್ಲಿ ಒಂದೇ ಚಿಕ್ಕ ಕಿಡಿಯಿದ್ದರೂ ಮತ್ತೆ ಮದ್ದು ತುಂಬಿಸುವಾಗ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈಗಾಗಲೇ ಕುಶಾಲ ತೋಪು ಸಿಡಿಸುವಾಗ ಅವಘಡಗಳು ಸಂಭವಿಸಿ ಅದನ್ನು ಸಿಡಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆಗಳೂ ಹಲವಷ್ಟು ನಡೆದಿರುವುದನ್ನು ನಾವು ಕಾಣಬಹುದಾಗಿದೆ.