ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಇನ್ನೇನು ಹತ್ರ ಬರುತ್ತಿದೆ. ಈಗಾಗಲೇ ಅರಮನೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಈನ್ನು ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಏಕೀಕೃತ ಟಿಕೇಟ್ ವ್ಯವಸ್ಥೆ ಕೂಡ ಜಾರಿ ಮಾಡಲಾಗಿದೆ. ಇದೀಗ ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ದಸರಾಕ್ಕೆ ಬರುವ ಅಂತಾರಾಜ್ಯದ ಜನರಿಗೆ ಸಿಹಿ ಸುದ್ದಿ ಕೊಟ್ಟಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ಆಗಮಿಸುವ ಅಂತಾರಾಜ್ಯ ವಾಹನಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ಮೈಸೂರು ನಗರ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ವ್ಯಾಪ್ತಿಯ ಕೆ.ಆರ್.ಎಸ್ ಜಲಾಶಯ ವೀಕ್ಷಿಸಲು ಹೋಗುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ಮಾಡಿ ಸಾರಿಗೆ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 6 ರವರೆಗೆ ಈ ತೆರಿಗೆ ವಿನಾಯಿತಿ ಇರಲಿದೆ.