ಮೈಸೂರು : ನಮ್ಮ ತಂದೆ ನಮ್ಮ ಊರಿನ ಜನರ ಮಾತನ್ನು ಕೇಳಿ, ಕುರುಬರೆಲ್ಲರು ಕಾನೂನು ಓದೋಕೆ ಆಗಲ್ಲ ಅಂತ ಹೇಳಿದ್ದರು. ಆದರೆ ನಾನು ಮಾತ್ರ ಹಠ ಬಿಡದೆ ಛಲದಿಂದ ಓದಿ ಲಾಯರ್ ಆದೆ, ಬಳಿಕ ಎರಡು ಬಾರಿ ಮುಖ್ಯಮಂತ್ರಿಯು ಆದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿನ 443.64 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯೆ ಯಾರೊಬ್ಬರ ಸ್ವತ್ತಲ್ಲ. ವಾಲ್ಮೀಕಿ, ವ್ಯಾಸ, ಕನಕದಾಸ ಎಲ್ಲರೂ ಶೂದ್ರ, ದಲಿತ ಸಮುದಾಯದವರು. ಮೇಲ್ವರ್ಗಕ್ಕೆ ಮಾತ್ರ ಶಿಕ್ಷಣ ಎನ್ನುವುದು ತಪ್ಪುಎಂದರು.
ಮಹಾಭಾರತ ಬರೆದ ವ್ಯಾಸರು ಬೆಸ್ತರು, ರಾಮಾಯಣ ಬರೆದ ವಾಲ್ಮೀಕಿ ಬೇಡ ಸಮುದಾಯದವರು, ಶಾಕುಂತಲ ಬರೆದ ಕಾಳಿದಾಸರು ಕುರುಬ ಸಮುದಾಯದವರು. ವಿದ್ಯೆ ಯಾರೊಬ್ಬರ ಸ್ವತ್ತು ಅಲ್ಲ. ಅವಕಾಶಗಳು ಸಿಗಬೇಕು ಅಷ್ಟೇ. ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಶಿಲ್ಪಿ ನಾವೇ. ಆದ್ದರಿಂದ ವಿದ್ಯೆ ಕಲಿಯಲೇಬೇಕು. ಶೂದ್ರ ಜಾತಿಯ ಕನಕದಾಸರು ದಾಸ ಶ್ರೇಷ್ಠರಾದರು. ಆದ್ದರಿಂದ ವಿದ್ಯಾವಂತರಾಗಲು ಜಾತಿ ಅಡ್ಡಿ ಬರುವುದಿಲ್ಲ ಎಂದರು.