ಚಿತ್ರದುರ್ಗ : ಚಿತ್ರದುರ್ಗದ ಮುರುಘಾಮಠದ ರಾಜಾಂಗಣದಲ್ಲಿದ್ದ 47 ಫೊಟೋಗಳು ಕಳುವಾಗಿದ್ದು, ಈ ಸಂಬಂಧ ಚಿತ್ರದುರ್ಗ ಗ್ರಾಮೀಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಠದ ಪ್ರಭಾರ ಪೀಠಾಧ್ಯಕ್ಷ ಮಹಾಂತ ರುದ್ರೇಶ್ವರಶ್ರೀ ‘ ಭಕ್ತರ ವೇಷದಲ್ಲಿ ಬಂದು 47 ಫೋಟೋಗಳನ್ನು ಕಳ್ಳತನ ಮಾಡಿದ್ದಾರೆ. ಗಣ್ಯರ ಜೊತೆ ಮುರುಘಾ ಶರಣರು ಇರುವ ಫೋಟೋಗಳನ್ನು ಕಳ್ಳತನ ಮಾಡಿದ್ದಾರೆ’ ಎಂದು ಹೇಳಿದ್ದಾರೆ.
ಮಠದ ರಾಜಾಂಗಣದ ಗೋಡೆಗೆ ಹಾಕಿದ್ದ ಫೋಟೋಗಳ ಕಳ್ಳತನ ಮಾಡಲಾಗಿದೆ. ಮಠದ ಬಗ್ಗೆ ಗೊತ್ತಿರುವವರೇ ಈ ಕೆಲಸ ಮಾಡಿದ್ದಾರೆ, ಎಸ್ ಜೆ ಎಂ ಸಂಸ್ಥೆಯ ನೌಕರರು ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುರುಘಾಮಠದ ಪೀಠಾಧಿಪತಿ ಅವರೊಂದಿಗೆ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಇರುವ ಛಾಯಾಚಿತ್ರಗಳನ್ನು ಮಠದ ರಾಜಾಂಗಣದೊಳಗೆ ಅಳವಡಿಸಲಾಗಿತ್ತು. ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಗುರುವಾರ ಶೂನ್ಯ ಪೀಠಾರೋಹಣ ಹಾಗೂ ಬಸವಣ್ಣ, ಅಲ್ಲಮಪ್ರಭು ದೇವರ ಭಾವಚಿತ್ರಗಳ ಮೆರವಣಿಗೆ ವೇಳೆ ಫೋಟೋಗಳು ಇಲ್ಲದಿರುವುದು ಬೆಳಕಿಗೆ ಬಂದಿವೆ.
ಮಠದಲ್ಲಿನ ಫೋಟೋಗಳ ಕಳವು ಪ್ರಕರಣ ಕುರಿತಂತೆ ಎಸ್ ಜೆಎಂ ಕಾರ್ಯದರ್ಶಿ ಎಸ್.ಬಿ.ವಸ್ತ್ರಮಠ, ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ ಪಿ ಪರಶುರಾಮ್ ತಿಳಿಸಿದ್ದರು.