ಚಿತ್ರದುರ್ಗ : ಮುರುಘಾ ಶ್ರೀ ಲೈಂಗಿಕ ಕಿರುಕುಳದ ಬಗ್ಗೆ ಮಠದ ಅಡುಗೆ ಭಟ್ಟ ಕರಿ ಬಸ್ಸಪ್ಪ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಬೆಚ್ಚಿ ಬೀಳಿಸುವ ಮಾಹಿತಿ ರಿವೀಲ್ ಮಾಡಿದ್ದಾರೆ.
ವಾರ್ಡನ್ ರಶ್ಮಿ ಮತ್ತು ಮಕ್ಕಳು ಮುರುಘಾ ಶ್ರೀ ರೂಮಿಗೆ ಹೋದಾಗ ನನ್ನನ್ನು ಬಿಟ್ಟುಕೊಳ್ಳುತ್ತಿರಲಿಲ್ಲ, ಸುಮಾರು ಗಂಟೆ ನಂತರ ಹೊರಕ್ಕೆ ಬರುತ್ತಿದ್ದರು, ಹಾಸ್ಟೆಲ್ ಬಾಲಕಿಯರನ್ನು ಸ್ವಾಮೀಜಿ ರೂಮಿಗೆ ಕರೆಸಿಕೊಳ್ಳುತ್ತಾರೆ ಎಂದು ಮಠಕ್ಕೆ ಬರುವ ಜನರು ಮಾತನಾಡುತ್ತಿದ್ದರು, , ನಮಗೂ ಹಲವು ಬಾರಿ ಅನುಮಾನ ಬಂದಿದೆ. ಬಟ್ಟೆಯಲ್ಲಿ ಕಲೆ ಉಳಿಯದಂತೆ ತೊಳೆಯಿರಿ ಎಂದು ಕೆಲಸಗಾರರಿಗೆ ಮುರುಘಾ ಶ್ರೀ ಹೇಳುತ್ತದ್ದರು ಎಂದು ಅಡುಗೆ ಭಟ್ಟ ಕರಿಬಸಪ್ಪ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ, ಈ ಬಗ್ಗೆ ಆಫೀಸ್ ಬಾಯ್ ಪ್ರಜ್ವಲ್ ಹೇಳಿಕೆ ನೀಡಿದ್ದು, ಕೆಲಸ ಇದೆ ಎಂದು ಸ್ವಾಮೀಜಿ ಬೆಡ್ ರೂಂಗೆ ಬಾಲಕಿಯರನ್ನು ಕರೆಸಿಕೊಳ್ಳುತ್ತಿದ್ದರು. ಈ ವಿಚಾರ ನನಗೆ ಗೊತ್ತಿದೆ ಆದರೆ ರೂಮಿನಲ್ಲಿ ಏನು ನಡೆಯಿತು ಎಂಬುದು ಮಾತ್ರ ಗೊತ್ತಿಲ್ಲ ಎಂದು ಪ್ರಜ್ವಲ್ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಇನ್ನೂ, ಚಿತ್ರದುರ್ಗದ ಮುರುಘಾ ಮಠದಲ್ಲಿ ಕೇವಲ ಮುರುಘಾ ಶರಣರು ಮಾತ್ರವಲ್ಲ ಅವರ ಕೆಳ ಹಂತದವರು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಪರಶುರಾಮ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.
ಶರಣರು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡ ಮೇಲೆ ಅವರ ಕೆಳ ಹಂತದಲ್ಲಿ ಗುರು ಸ್ಥಾನದಲ್ಲಿರೋ ವ್ಯಕ್ತಿಯೂ ಮಕ್ಕಳನ್ನು ತಮ್ಮ ಕಾಮಕ್ಕೆ ಬಳಸಿದ್ದಾರೆ. ಆ ವ್ಯಕ್ತಿಯನ್ನು ಬುದ್ದಿ ಎಂದು ಕರೆಯಲಾಗುತ್ತೆ. ಅವರ ನಂತರ, ಮಠದ ಕೆಲವು ನೌಕರರು, ಅಧಿಕಾರಿಗಳು ಕೂಡ ಮಕ್ಕಳನ್ನು ಲೈಂಗಿಕವಾಗಿ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.ಕಾಡುಮೃಗ ಬೇಟೆಯಾಡಿ ಬಿಟ್ಟು ಹೋದ ಮಾಂಸವನ್ನು ಬೇರೆ ಪ್ರಾಣಿಗಳು ತಿನ್ನುವ ರೀತಿ ಈ ಪ್ರಕ್ರಿಯೆ ನಡೆದಿದೆ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು. ಹೀಗಾಗಿ ಪ್ರಕರಣವನ್ನು ಸಿಬಿಐ ಗೆ ವಹಿಸಿ ಎಂದು ಆಗ್ರಹಿಸಿದ್ದಾರೆ.
ನಿನ್ನೆ ಬಿಡುಗಡೆ ಆಗಿರೋ ಆಡಿಯೋ ಆರು ತಿಂಗಳ ಹಿಂದಿನದೂ ಅದಕ್ಕೂ ನಮಗೂ ಸಂಬಂಧವಿಲ್ಲ. ಈ ಬಗ್ಗೆ ನಾವು ಯಾವ ತನಿಖೆಗೆ ಬೇಕಾದರೂ ಸಿದ್ಧ ಎಂದ ಅವರು, ಮುರುಘಾ ಶರಣರಿಗೆ ಮದ್ಯ ತಂದು ಕೊಡುತ್ತಿದ್ದವರು ಯಾರು? ಡ್ರಗ್ಸ್ ಸರಬರಾಜು ಮಾಡುತ್ತಿದ್ದವರು ಯಾರು ಎಂಬುದು ಪತ್ತೆ ಆಗಬೇಕು ಎಂದಿದ್ದಾರೆ.