ಬೆಂಗಳೂರು: ದೇಶದ ಮಹತ್ವದ ಆಡಳಿತಾತ್ಮಕ ಪ್ರಕ್ರಿಯೆಯಾದ 2027ರ ಜನಗಣತಿಗೆ ಕ್ಷಣಗಣನೆ ಆರಂಭವಾಗಿದೆ. ಇದರ ಮೊದಲ ಹಂತವಾಗಿ ‘ಮನೆಗಳ ಪಟ್ಟಿ ಮತ್ತು ಮನೆ ಗಣತಿ’ (HLO) ಕಾರ್ಯಕ್ಕೆ ಕರ್ನಾಟಕ ಸರ್ಕಾರವು ಚಾಲನೆ ನೀಡಿದ್ದು, ಸಾರ್ವಜನಿಕರು ತಾವಾಗಿಯೇ ಮಾಹಿತಿ ದಾಖಲಿಸಲು ‘ಸ್ವಯಂ-ಗಣತಿ’ (Self-Enumeration) ಎಂಬ ವಿಶೇಷ ಅವಕಾಶವನ್ನು ಕಲ್ಪಿಸಿದೆ.
ಏನಿದು ಸ್ವಯಂ-ಗಣತಿ?
ಈ ಬಾರಿ ಜನಗಣತಿ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸಲಾಗಿದ್ದು, ಸಾರ್ವಜನಿಕರು ಗಣತಿದಾರರಿಗಾಗಿ ಕಾಯುವ ಅಗತ್ಯವಿಲ್ಲದೆ ಆನ್‌ಲೈನ್ ಮೂಲಕವೇ ತಮ್ಮ ಕುಟುಂಬದ ವಿವರಗಳನ್ನು ಸಲ್ಲಿಸಬಹುದು.
ಮನೆಯ ಯಾವುದೇ ಒಬ್ಬ ಜವಾಬ್ದಾರಿಯುತ ಸದಸ್ಯರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಇದಕ್ಕೆ ಕೇವಲ 15 ರಿಂದ 20 ನಿಮಿಷಗಳ ಕಾಲಾವಕಾಶ ಸಾಕು.
ನೋಂದಣಿ ಮಾಡುವುದು ಹೇಗೆ?
ಅಧಿಕೃತ ಜಾಲತಾಣ: ಸಾರ್ವಜನಿಕರು https://se.census.gov.in ಪೋರ್ಟಲ್‌ಗೆ ಭೇಟಿ ನೀಡಬೇಕು.
ನಿಗದಿತ ಅವಧಿ: ಈ ಸ್ವಯಂ-ಗಣತಿ ಪ್ರಕ್ರಿಯೆಯು 2026ರ ಏಪ್ರಿಲ್ 1 ರಿಂದ ಏಪ್ರಿಲ್ 15ರವರೆಗೆ (15 ದಿನಗಳು) ಮಾತ್ರ ಲಭ್ಯವಿರುತ್ತದೆ.
SE ID ಪಡೆಯುವುದು: ಮಾಹಿತಿ ಸಲ್ಲಿಕೆಯಾದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ‘ಸ್ವಯಂ-ಗಣತಿ ಐಡಿ’ (SE ID) ಬರಲಿದೆ. ಇದನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಕಡ್ಡಾಯ.
ಗಣತಿದಾರರು ಮನೆಗೆ ಬಂದಾಗ ಏನು ಮಾಡಬೇಕು?
ಸ್ವಯಂ-ಗಣತಿ ಪೂರ್ಣಗೊಳಿಸಿದ ನಂತರವೂ ಗಣತಿದಾರರು ಮನೆ-ಮನೆಗೆ ಭೇಟಿ ನೀಡುತ್ತಾರೆ. ಆ ಸಮಯದಲ್ಲಿ ನೀವು ಈಗಾಗಲೇ ಪಡೆದಿರುವ SE ID ಯನ್ನು ಅವರಿಗೆ ತೋರಿಸಬೇಕು. ಇದರಿಂದ ನಿಮ್ಮ ಮಾಹಿತಿಯ ದೃಢೀಕರಣ ತಕ್ಷಣವೇ ಮುಗಿಯುತ್ತದೆ ಮತ್ತು ಗಣತಿದಾರರ ಕೆಲಸವೂ ಸುಲಭವಾಗಲಿದೆ.
ಸರ್ಕಾರದ ಆದೇಶ: “ರಾಜ್ಯದ ಎಲ್ಲಾ ಇಲಾಖೆಗಳು, ನಿಗಮ ಮತ್ತು ಮಂಡಳಿಗಳ ಅಧಿಕಾರಿಗಳು ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ನಾಗರಿಕರು ಸಕ್ರಿಯವಾಗಿ ಭಾಗವಹಿಸಿ 2027ರ ಜನಗಣತಿಯನ್ನು ಯಶಸ್ವಿಗೊಳಿಸಬೇಕು,” ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ ಜಿ.ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









