ಮಂಗಳೂರು : ಮೂಡಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಅವರ ಆಡಿಯೋ ಮತ್ತು ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಇನ್ಸ್ಪೆಕ್ಟರ್ ವರ್ತನೆಯಲ್ಲಿ ಲೋಪವಿರುವುದು ನಿಜವಾದರೂ, ಅವರ ವಿರುದ್ಧದ ಕೆಲವು ದೂರುಗಳು ಪೂರ್ವಗ್ರಹ ಪೀಡಿತ ಮತ್ತು ಸುಳ್ಳು ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಇಬ್ಬರು ಮಹಿಳೆಯರ ಆರೋಪ ಸುಳ್ಳು ಎಂದು ಪೊಲೀಸ್ ವರದಿಯಲ್ಲಿ ತಿಳಿದು ಬಂದಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಇನ್ಸ್ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಮತ್ತು ಪ್ರೇರಿತ ಎಂದು ಸಾಬೀತು ಆಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದರು.
ಇದೇ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ನೀಡಿದ್ದ ಕಿರುಕುಳದ ದೂರುಗಳ ಬಗ್ಗೆ ಪ್ರಸ್ತಾಪಿಸಿರುವ ಸುಧೀರ್ ಕುಮಾರ್ ರೆಡ್ಡಿ, ತನಿಖೆಯಲ್ಲಿ ಈ ದೂರುಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂಬುದು ಸಾಬೀತಾಗಿದೆ. ಆಡಿಯೋ/ವಿಡಿಯೋದಲ್ಲಿರುವ ಮಹಿಳೆಯರು ತಾವು ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ.
ವಿಡಿಯೋ ಕೂಡ ಮುಜುಗರ ಉಂಟು ಮಾಡುವಂತಿದ್ದು, ಇನ್ಸ್ಪೆಕ್ಟರ್ ಅವರ ದುರ್ನಡತೆ ಇಲ್ಲಿ ಎದ್ದು ಕಾಣುತ್ತಿದೆ ಎಂದು ವಾಟ್ಸ್ಆ್ಯಪ್ ಸಂದೇಶದಲ್ಲಿ ಪೊಲೀಸ್ ಆಯುಕ್ತರು ಮಾಹಿತಿ ಹಂಚಿಕೊಂಡಿದ್ದಾರೆ. ಮಂಗಳೂರಿನಲ್ಲಿ ವರ್ಷಗಳಿಂದ ನಡೆಯುತ್ತಿರುವ ಬ್ಲ್ಯಾಕ್ಮೇಲ್ ತಂತ್ರವನ್ನೇ ಇಲ್ಲಿಯೂ ಬಳಸಲಾಗಿದೆ ಎಂದು ತಿಳಿಸಿದರು.
ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋದಲ್ಲಿ ಇನ್ಸ್ಪೆಕ್ಟರ್ ಸಂದೇಶ್ ಅವರ ಮಾತು ಹಾಗೂ ವರ್ತನೆ ಸರಿ ಇಲ್ಲದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಎಲ್ಲರೂ ಆ ಆಡಿಯೋ ಕೇಳಿದ್ದಾರೆ, ಇನ್ಸ್ಪೆಕ್ಟರ್ ಹೇಗೆ ಮಾತನಾಡಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಈ ಬಗ್ಗೆ ಮೊದಲೇ ಕ್ರಮ ಕೈಗೊಳ್ಳಬೇಕಿತ್ತು, ಆದರೆ ತಡವಾಗಿ ಈಗ ಹೊರಬಂದಿದೆ.
ಆಡಿಯೋದಲ್ಲಿರುವ ಮಹಿಳೆಯರ ಬಗ್ಗೆ ಜನರಲ್ಲಿ ಒಂದು ಗೊಂದಲವಿದೆ. ಆದರೆ ಅದು ನಿಜವಲ್ಲ. ಇನ್ಸ್ಪೆಕ್ಟರ್ ಸಂದೇಶ್ ಹಿಂದೆ ಮಾಡಿದ ತಪ್ಪುಗಳನ್ನು ಈಗ ಅವರ ವಿರುದ್ಧದ ಸುಳ್ಳು ಆರೋಪಗಳೊಂದಿಗೆ ಬೆರೆಸಿ ಬಳಸಿಕೊಳ್ಳಲಾಗುತ್ತಿದೆ. ಇನ್ಸ್ಪೆಕ್ಟರ್ ವಿರುದ್ಧ ಈಗ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಪೊಲೀಸ್ ಠಾಣೆಗೆ ಬರುವ ಮಹಿಳೆಯರೊಂದಿಗೆ ಹೇಗೆ ಗೌರವದಿಂದ ವರ್ತಿಸಬೇಕು ಎಂಬ ಸಂದೇಶ ಎಲ್ಲರಿಗೂ ತಲುಪಿದಂತಾಗಿದೆ.








