ಬೆಂಗಳೂರು: ಸದನದಲ್ಲಿ ಮುಡಾ ಹಗರಣ ಸಂಬಂಧ ಚರ್ಚೆಗೆ ಅವಕಾಶ ನೀಡದ ಕಾರಣ, ವಿಧಾನಸಭೆಯಲ್ಲೇ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಿಂದ ಆಹೋರಾತ್ರಿ ಧರಣಿಗೆ ಕರೆ ನೀಡಲಾಗಿತ್ತು. ಇದೀಗ ಸದನ ಮುಂದೂಡಲ್ಪಟ್ಟರೂ, ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಿಂದ ಅಹೋರಾತ್ರಿ ಧರಣಿಯನ್ನು ಆರಂಭಿಸಲಾಗಿದೆ.
ಬಿಜೆಪಿ ಶಾಸಕರು ಮತ್ತು ಮೇಲ್ಮನೆ ಸದಸ್ಯರು ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಅಹೋರಾತ್ರಿ ಧರಣಿ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದರು.
ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ; ಮುಖ್ಯಮಂತ್ರಿಗಳ ಕುಟುಂಬಕ್ಕೆ ಮೈಸೂರಿನಲ್ಲಿ ಮೂಡದಿಂದ ಕೊಟ್ಟ 14 ನಿವೇಶನಗಳು ವಾಪಸ್ ಬರಬೇಕು. ಈ ಸರಕಾರವು ಅಧಿಕಾರಕ್ಕೆ ಬಂದ ಬಳಿಕ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿದೆ. ಆ ಹಂಚಿಕೆಯನ್ನು ರದ್ದು ಮಾಡಬೇಕಿದೆ ಎಂದು ಆಗ್ರಹಿಸಿದರು.
ನಾವು ಚುನಾಯಿತ ಪ್ರತಿನಿಧಿಗಳು; ಬಡವರ ನಿವೇಶನಗಳನ್ನು ಮನಸೋ ಇಚ್ಛೆ ಹಂಚಿದ ಕುರಿತು ಜನರು ನಮ್ಮನ್ನು ಕೇಳುತ್ತಿದ್ದಾರೆ. ಮೂಡದಲ್ಲಿ ಮುಖ್ಯಮಂತ್ರಿಗಳ ಕುಟುಂಬವು ನಿವೇಶನ ಪಡೆದ ಕುರಿತು ಚರ್ಚಿಸಲು ಮುಂದಾದರೆ, ತನಿಖಾ ಆಯೋಗದ ಮುಂದೆ ಹೋಗಿ ಎಂದು ಕಾನೂನು ಸಚಿವರು ಹೇಳುತ್ತಾರೆ. ಯಾವ ತನಿಖಾ ಆಯೋಗದ ಬಗ್ಗೆ ಮಾತನಾಡುತ್ತೀರಿ ಎಂದು ಕೇಳಿದರು. ಹಿಂದೆ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇದ್ದಾಗ ಯಾವ್ಯಾವ ತನಿಖಾ ಆಯೋಗದ ಪರಿಸ್ಥಿತಿ ಏನಾಗಿದೆ ಎಂದು ರಾಜ್ಯದ ಜನತೆಗೆ ಗೊತ್ತಿದೆ ಎಂದು ನುಡಿದರು.
ಮುಖ್ಯಮಂತ್ರಿಗಳು ಯಾಕೆ ಪಲಾಯನವಾದ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಧೈರ್ಯಸ್ಥರಾದ ಮುಖ್ಯಮಂತ್ರಿಗಳು ಚರ್ಚೆಗೆ ಅವಕಾಶ ನೀಡುವರೆಂಬ ವಿಶ್ವಾಸದಲ್ಲಿದ್ದೆವು. ಆದರೆ, ಸಿದ್ದರಾಮಯ್ಯನವರು ದಿವ್ಯಮೌನ ತಾಳಿದ್ದಾರೆ ಎಂದು ಆಕ್ಷೇಪಿಸಿದರು. ಕೆಲವು ಸಚಿವರು ಸಿಎಂ ಅವರನ್ನು ನಿನ್ನೆ ಭೇಟಿ ಮಾಡಲು ಹೋಗಿದ್ದಾಗ ಮುಖ್ಯಮಂತ್ರಿಯವರು ಅವರನ್ನು ತರಾಟೆಗೆ ತೆಗೆದುಕೊಂಡ ಮಾಹಿತಿ ಇದೆ ಎಂದು ತಿಳಿಸಿದರು. ಅದೇ ಕಾರಣಕ್ಕೆ ಇವತ್ತು ಕೆಲವು ಶಾಸಕರು ಹಾರಾಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ಇದು ಪ್ರಜಾಪ್ರಭುತ್ವದ ಕಗ್ಗೊಲೆ..
ಮೂಡ ಹಗರಣದ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಮಂಡಿಸಿದ್ದೆವು. ಕಾನೂನು ಸಚಿವರಾದ ಎಚ್.ಕೆ.ಪಾಟೀಲರು ಮಾತನಾಡಿ, ತನಿಖಾ ಆಯೋಗ ರಚಿಸಿದ್ದೇವೆ. ಅದರ ಮುಂದೆ ಹೇಳಿಕೆ ಕೊಡಿ ಎಂದು ತಿಳಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿಜಯೇಂದ್ರ ಅವರು ಟೀಕಿಸಿದರು.
ದಲಿತರು, ಬಡವರಿಗೆ ನ್ಯಾಯ ಸಿಗುವ ವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಇ.ಡಿ. ವಿರುದ್ಧ ಎಫ್‍ಐಆರ್ ದಾಖಲಿಸಿದ ರಾಜ್ಯ ಸರಕಾರದ ಕ್ರಮಕ್ಕೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ರಾಜ್ಯ ಸರಕಾರಕ್ಕೆ ಮುಖಭಂಗ ಆಗಿದೆ. ಹೈಕೋರ್ಟ್, ಸರಕಾರದ ವಿರುದ್ಧ ಚಾಟಿ ಏಟು ಬೀಸಿದೆ ಎಂದು ತಿಳಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಮೂಡ ಹಗರಣದಲ್ಲಿ ಕಾಂಗ್ರೆಸ್ ಪಕ್ಷವು 4 ಸಾವಿರ ಕೋಟಿ ಲೂಟಿ ಮಾಡಿದೆ ಎಂದು ಆರೋಪಿಸಿದರು. ಈ ಕುರಿತ ನಿಲುವಳಿ ಸೂಚನೆ ತಂದಿದ್ದು, ಸರಕಾರ ಹೆದರಿ ಓಡಿ ಹೋಗಿದೆ ಎಂದು ಟೀಕಿಸಿದರು. ಇದೇವೇಳೆ ಹಲವು ಮಸೂದೆಗಳಿಗೆ ಒಪ್ಪಿಗೆ ನೀಡಿದೆ ಎಂದು ದೂರಿದರು.
ಸರಕಾರವು ಹೇಡಿಗಳಂತೆ ವರ್ತಿಸಿದೆ. ಸಿಎಂ ಅವರಿಗೆ ಧೈರ್ಯ, ಮಾನ- ಮರ್ಯಾದೆ ಇದ್ದರೆ 14 ನಿವೇಶನಗಳನ್ನು ನ್ಯಾಯಯುತವಾಗಿ ಪಡೆದುದಾಗಿ ಅವರು ತಿಳಿಸಬೇಕಿತ್ತು ಎಂದು ಸವಾಲು ಹಾಕಿದರು. ವಾಲ್ಮೀಕಿ ನಿಗಮದಲ್ಲಿ ದಲಿತರ 187 ಕೋಟಿ ಹಣವನ್ನು ಚೆಕ್‍ಗಳ ಮೂಲಕ ಲೂಟಿ ಮಾಡಿದ್ದಾರೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ 25 ಸಾವಿರ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ಈಗ ಮೂಡದಲ್ಲಿ ದಲಿತರ ಜಮೀನಿನ ವಿಚಾರದಲ್ಲೂ ಅನ್ಯಾಯವಾಗಿದೆ. ಅವರು ಕೇಂದ್ರದ ಎಸ್‍ಸಿ, ಎಸ್‍ಟಿ ಇಲಾಖೆಗೆ ದೂರು ನೀಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನ ಬ್ರಹ್ಮಾಂಡ ಭ್ರಷ್ಟಾಚಾರ..
ಮೋಸದಿಂದ ಜಮೀನಿನ ಲೂಟಿ ಕುರಿತು ದೂರನ್ನು ಜಿಲ್ಲಾಧಿಕಾರಿಗಳಿಗೂ ನೀಡಿದ್ದಾರೆ. ಅದರ ದೂರಿನ ಪ್ರತಿ ನನ್ನ ಬಳಿ ಇದೆ ಎಂದರು. ಏಕಾಏಕಿ ಜಮೀನಿನ ಭೂಪರಿವರ್ತನೆ, ಡಿನೋಟಿಫಿಕೇಶನ್ ಮಾಡಿದ್ದಾರೆ. ಕಾಂಗ್ರೆಸ್ಸಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ ಎಂದು ಆರ್. ಅಶೋಕ್ ಅವರು ಟೀಕಿಸಿದರು.
ಕಾಂಗ್ರೆಸ್ಸಿನ ಅತಿರಥ- ಮಹಾರಥರು ಸದನದಲ್ಲಿ ಬಾಯಿ ಬಿಟ್ಟಿಲ್ಲ. ಸಿದ್ದರಾಮಯ್ಯನವರ ಬೆಂಬಲಕ್ಕೆ ಯಾರೂ ನಿಂತಿಲ್ಲ ಎಂದು ತಿಳಿಸಿದರು. ವಿಪಕ್ಷಗಳ ಮಾತನಾಡುವ ಹಕ್ಕು ಕಸಿದ ಮತ್ತು ದಮನಕಾರಿ ನೀತಿಯನ್ನು ಖಂಡಿಸಿದರು. ಇದರ ವಿರುದ್ಧ ಹಗಲು- ರಾತ್ರಿ ಧರಣಿಯನ್ನು ಘೋಷಿಸುವುದಾಗಿ ವಿವರ ನೀಡಿದರು. ನೀತಿಗೆಟ್ಟ ಮತ್ತು ನೀಚ ಸರಕಾರದ ವಿರುದ್ಧ ಹೋರಾಟ ಇದಾಗಲಿದೆ ಎಂದು ಪ್ರಕಟಿಸಿದರು.
ಇಂದು ವಿಧಾನಸಭೆಯ ಸದನ ನಾಳೆಗೆ ಮುಂದೂಡಿದ ನಂತ್ರ, ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಉಳಿದಿದ್ದಾರೆ. ಘೋಷಣೆಯಂತೆ ಸದನ ಮುಂದೂಡಲ್ಪಟ್ಟರೂ ಸದನದಲ್ಲೇ ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಇನ್ನೂ ಡಿಸಿಎಂ ಡಿ.ಕೆ ಶಿವಕುಮಾರ್ ಸದನ ಮುಂದೂಡಲ್ಪಟ್ಟರೂ ಸದನದಲ್ಲೇ ಉಳಿದಿದ್ದೂ, ಅಲ್ಲಿಯೇ ಕಡತಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿದು ಬಂದಿದೆ.
ಕೆಲವೇ ಕ್ಷಣಗಳಲ್ಲಿ ಸಿಎಂ ಸಿದ್ಧರಾಮಯ್ಯ ರಾಜ್ಯಪಾಲರ ಭೇಟಿ: ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆ, ವರದಿ ಸಾಧ್ಯತೆ
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ‘ಗ್ರಾಮಠಾಣ’ ಒಳಗಿನ, ಹೊರಗಿನ ‘ಆಸ್ತಿ ಅಳತೆ’ಗೆ ಅವಕಾಶ