ಕಾರವಾರ : ಸೀಬರ್ಡ್ ನೌಕಾನಲೆ ಯೋಜನೆಗೆ ಭೂ ಸ್ವಾದೀನಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 18 (1) ಅಡಿಯಲ್ಲಿನ 5 ಪ್ರಕರಣ ಮತ್ತು 28 ಬಿ ಅಡಿಯಲ್ಲಿನ 112 ಪ್ರಕರಣಗಳಿಗೆ ಒಟ್ಟು ರೂ.27.70 ಕೋಟಿಗಳ ಹೆಚ್ಚುವರಿ ಪರಿಹಾರವನ್ನು ಬಿಡುಗಡೆಗೊಳಿಸಿದ್ದು, ಇವುಗಳಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಿದ 35 ಪ್ರಕರಣಗಳಲ್ಲಿನ ಫಲಾನುಭವಿಗಳಿಗೆ ರೂ.6.87 ಕೋಟಿ ಪರಿಹಾರವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.
ನಂತರ ಮಾತನಾಡಿದ ಅವರು ಸೀಬರ್ಡ್ ನೌಕಾನಲೆ ಯೋಜನೆಗೆ ಭೂ ಸ್ವಾದೀನಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಪರಿಹಾರದ ಮೊತ್ತವನ್ನು ಪಾವತಿಗೆ ಇರುವ ಸಮಸ್ಯೆಗಳ ಕುರಿತು ಕೇಂದ್ರ ರಕ್ಷಣಾ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದು, ಅದರಂತೆ ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ಸಚಿವರು ನೇಮಕ ಮಾಡಿದ ನಂತರ ಪರಿಹರದ ಮೊತ್ತ ಬಿಡುಗಡೆ ಕಾರ್ಯ ಶೀಘ್ರಗೊಂಡಿದ್ದು, ಇದುವರೆಗೆ ರೂ.35 ಕೋಟಿ ಬಿಡುಗಡೆಗೊಂಡಿದೆ. ಬಾಕಿ ಉಳಿದಿರುವ 215 ಪ್ರಕರಣಗಳಿಗೆ ಬಿಡುಗಡೆಯಗಬೇಕಾದ ರೂ.28.82 ಕೋಟಿ ಮೊತ್ತ ಕೂಡಾ ತ್ವರಿತಗತಿಯಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕೆಲಸಗಳು ಉತ್ತಮವಾಗಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 52ರ ಹೊಸಳ್ಳಿಯಿಂದ ಯಲ್ಲಾಪುರ ಹಾಗೂ ಮಾಸ್ತಿಕಟ್ಟೆಯಿಂದ ಬಾಳೆಗುಳಿ ವರೆಗಿನ ರಸ್ತೆ ಅಭಿವೃದ್ದಿಗೆ ರೂ.101 ಕೋಟಿ ಅನುದಾನ ಮಂಜೂರಾಗಿದೆ. ಕೊಂಕಣ ರೈಲ್ವೆಯಲ್ಲಿ ಬಾಕಿ ಇರುವ ಭೂ ಸ್ವಾಧೀನ ಪ್ರಕರಣಗಳ ಕುರಿತು ವಿಚಾರಣೆ ತ್ವರಿತಗತಿಯಲ್ಲಿ ನಡೆಯುತಿದ್ದು, ಸಂತ್ರಸ್ಥರಿಗೆ ಶೀಘ್ರದಲ್ಲಿ ಪರಿಹಾರ ದೊರೆಯಲಿದೆ ಎಂದ ಅವರು, ಪ್ರಸ್ತುತ ಸೀಬರ್ಡ್ ಸಂತ್ರಸ್ಥರು ತಮಗೆ ದೊರೆತಿರುವ ಪರಿಹಾರದ ಮೊತ್ತವನ್ನು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಸೀಬರ್ಡ್ ಯೋಜನೆಗಾಗಿ ಒಟ್ಟು 2400 ಎಕ್ರೆ ಖಾಸಗಿ ಜಮೀನನ್ನು ಮತ್ತು 7000 ಎಕ್ರೆ ಅರಣ್ಯ ಜಮೀನನ್ನು ಸ್ವಾಧೀನಪಡಿಸಕೊಳ್ಳಲಾಗಿದ್ದು, ಸಂತ್ರಸ್ಥರಿಗೆ ಪರಿಹಾರ ಪಾವತಿ ಕುರಿತಂತೆ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯಲ್ಲಿ ದಾಖಲಾದ ಪ್ರಕರಣಗಳಿಗೆ ಹೆಚ್ಚುವರಿ ಪರಿಹಾರ ವಿತರಿಸಲಾಗುತ್ತಿದ್ದು, ಇದುವರೆಗೆ ಒಟ್ಟು 647.58 ಕೋಟಿ ಪರಿಹಾರ ಡಿಫೆನ್ಸ್ ಎಸ್ಟೇಟ್ ಆಫೀಸರ್ ಬೆಂಗಳೂರು ಅವರಿಂದ ಬಿಡುಗಡೆಯಾಗಿದೆ ಎಂದರು.
ಜಿಲ್ಲೆಯ ಸಂತ್ರಸ್ಥರಿಗೆ ಪರಿಹಾರದ ಮೊತ್ತವನ್ನು ಒದಗಿಸುವ ಕಾರ್ಯಗಳನ್ನು ಜಿಲ್ಲಾಡಳಿತ ಆದ್ಯತೆಯಲ್ಲಿ ಮಾಡುತ್ತಿದ್ದು, ಸಂತ್ರಸ್ಥರು ಸೂಕ್ತ ದಾಖಲೆಗಳನ್ನು ತ್ವರಿತವಾಗಿ ನೀಡಿದಲ್ಲಿ ಪರಿಹಾರದ ಮೊತ್ತವನ್ನು ಶೀಘ್ರದಲ್ಲಿ ವಿತರಿಸಲು ಸಾಧ್ಯವಾಗಲಿದೆ. ಪರಿಹಾರ ಪಡೆಯುವಲ್ಲಿ ವಿವಾದಗಳಿದ್ದಲ್ಲಿ ಸದ್ರಿ ಪ್ರಕರಣದ ಮೊತ್ತವನ್ನು ನ್ಯಾಯಾಲಯಕ್ಕೆ ಜಮೆ ಮಾಡಲಾಗುತ್ತಿದೆ ಎಂದ ಅವರು, ಕೊಂಕಣ ರೈಲ್ವೆ ಸಂತ್ರಸ್ಥರ ಭೂ ಸ್ವಾಧೀನ ಕುರಿತ ವಿಚಾರಣೆಯು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಜಿಲ್ಲಾಡಳಿತದ ವತಿಯಿಂದ ಶೀಘ್ರದಲ್ಲಿ ಪರಿಹಾರದ ಮೊತ್ತವನ್ನು ದೊರಕಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ, ಜಿ.ಪಂ. ಸಿಇಓ ಡಾ.ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಸಹಾಯಕ ಆಯುಕ್ತ ಶ್ರವಣ ಕುಮಾರ್, ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಝೂಪಿಶಾನ್ ಹಕ್ ಉಪಸ್ಥಿತರಿದ್ದರು.
ಭೂ ಸ್ವಾದೀನ ಸಂತ್ರಸ್ಥರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆನ್ ಲೈನ್ ಮೂಲಕ ಪರಿಹಾರದ ಮೊತ್ತವನ್ನು ಜಮೆ ಮಾಡಲಾಯಿತು.
ಮಹಾತ್ಮ ಗಾಂಧೀಜಿಯವರ ಗ್ರಾಮ ರಾಜ್ಯ ಪರಿಕಲ್ಪನೆಯನ್ನು ಕಾಂಗ್ರೆಸ್ ಮೂಲೆಗುಂಪು ಮಾಡಿದೆ: ತೀ.ನ.ಶ್ರೀನಿವಾಸ್ ಕಿಡಿ
ಹೆಣ್ಣುಮಕ್ಕಳ ಪೋಷಕರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗೆ ‘HPV ಲಸಿಕೆ’ ಬಗ್ಗೆ ಮಹತ್ವದ ಮಾಹಿತಿ








